ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು.
ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ರೂಪಿಸಬೇಕು. ಎಲ್ಲಾ ನಗರ ಪ್ರದೇಶಗಳಲ್ಲಿ ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಸಮಯವೇ ಹಣ, ಯಾರೂ ಸಹ ಸಮಯ ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾವು ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ನಾನು, ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ಸೇರಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ತಿಳಿಸಿದರು.
“ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 70% ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದಾಗಿದೆ. ನಮ್ಮ ಪ್ರಗತಿ ನೋಡಿ ಅವರು ಈ ಲೆಕ್ಕಾಚಾರ ಮಾಡಿದ್ದಾರೆ. ಇದಕ್ಕೆ ಯಾವ ತಯಾರಿ ನಡೆಸಿದ್ದೀರಿ ಎಂದು ಕೇಳಿದರು. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ.
ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ. ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಅಧಿಸೂಚನೆ ಹೊರಡಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು” ಎಂದರು.
45ಕ್ಕೂ ಹೆಚ್ಚು ಕಂಪನಿಗಳ ಜೊತೆ ಹೂಡಿಕೆ ಬಗ್ಗೆ ಚರ್ಚೆ
“ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ನೀರು,
ವಿದ್ಯುತ್ ಪ್ರಮಾಣ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಂಪನಿಗಳು ಪಡೆದಿವೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿ ಭಾರತೀಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರುಗಳು ಕೂಡ ನಮ್ಮ ಕೈಗಾರಿಕ ಸಚಿವರಾದ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ” ಎಂದು ವಿವರಿಸಿದರು.
“ಈ ಬಾರಿಯ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹೊರ ದೇಶಗಳ ಕಂಪನಿಗಳು ಇಲ್ಲಿಗೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು. ಇನ್ನು ನಮ್ಮ ರಾಜ್ಯದ ಉದ್ಯಮಿಗಳು ಕೂಡ ಅಲ್ಲಿಗೆ ಬಂದು ತಮ್ಮ ಉದ್ಯಮ ವಿಸ್ತರಣೆಗೆ ತಮ್ಮ ಆಲೋಚನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ 50% ನಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.



