ಕಲಬುರಗಿ: ದ್ವೇಷ ಭಾಷಣ ಕಾಯ್ದೆಯಡಿ ವಿಕಾಸ್ ಪುತ್ತೂರುಗೆ ನೋಟಿಸ್ ನೀಡಿರುವ ವಿಚಾರದ ಕುರಿತು ನನಗೆ ಮಾಹಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾಕೆ ನಿರಂತರವಾಗಿ ದ್ವೇಷ ಭಾಷಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಕಾಂಗ್ರೆಸ್, ಮುಸ್ಲಿಂ ಸೇರಿದಂತೆ ನಾಲ್ಕು ಪದಗಳನ್ನು ಬಿಟ್ಟು ಬೇರೆ ಏನು ಮಾತನಾಡಲು ಬರೋದಿಲ್ಲ ಎಂದು ಸಚಿವರು ಟೀಕಿಸಿದರು. ಬಿಎನ್ಎಸ್ ಕಾಯ್ದೆಯಲ್ಲಿಯೂ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅಂಶಗಳಿದ್ದು, ಅದರಡಿ ಪೊಲೀಸರು ನೋಟಿಸ್ ನೀಡಿರಬಹುದು ಎಂದು ಹೇಳಿದರು.
ಸಿ.ಟಿ. ರವಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದ ಪ್ರಿಯಾಂಕ್ ಖರ್ಗೆ, ರಾಜೀವ್ ಗೌಡ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ. ಆದರೆ ಪೋಕ್ಸೋ ಪ್ರಕರಣ ಇರುವ ವ್ಯಕ್ತಿಯನ್ನು ಬಿಜೆಪಿಯವರು ವೇದಿಕೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಸಿ.ಟಿ. ರವಿ ಅವರು ಸದನದಲ್ಲಿ ಅವಾಚ್ಯವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೆ ವಾಯ್ಸ್ ಸ್ಯಾಂಪಲ್ ನೀಡಿಲ್ಲ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ರಾಜ್ಯ ಸರ್ಕಾರದ ನೀತಿಗಳನ್ನು ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ ಅದನ್ನು ರಾಜ್ಯಪಾಲರು ಓದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಕೆಟ್ಟ ಶಬ್ದಗಳನ್ನು ಬಳಸಿಲ್ಲ. ಆದರೂ ರಾಜ್ಯಪಾಲರು ನೀತಿ ನಿಯಮಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಬೆಳಗಾವಿ ಗಡಿ ಭಾಗದಲ್ಲಿ ನಡೆದ 400 ಕೋಟಿ ರೂ ದರೋಡೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಾಗಾದರೆ ನೋಟು ಅಮಾನಿಕರಣ ಏನಾಯ್ತು ಎಂದು ಪ್ರಶ್ನಿಸಿದರು. “ನಾ ಕಾವೊಂಗಾ, ನಾ ಖಾನೆದೊಂಗಾ” ಅನ್ನೋದು ಎಲ್ಲಿ ಹೋಯಿತು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ತೊಗರಿಗೆ ಎಂಎಸ್ಪಿ ಬೆಂಬಲ ಬೆಲೆ ಘೋಷಣೆಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ಕಬ್ಬಿಗೂ ನಾವೇ ಬೆಂಬಲ ಬೆಲೆ ಕೊಡಬೇಕು, ತೊಗರಿಗೂ ನಾವೇ ಕೊಡಬೇಕು ಎನ್ನುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ಎಂಎಸ್ಪಿ ದರವನ್ನು ನಿಗದಿ ಮಾಡೋದು ಕೇಂದ್ರ ಸರ್ಕಾರ. ಎಲ್ಲದಕ್ಕೂ ರಾಜ್ಯ ಸರ್ಕಾರವೇ ಮಾಡಬೇಕು ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.



