ಚಿಕ್ಕಮಗಳೂರು: ಯಾವ ಮತೀಯ ಗ್ರಂಥದಿಂದ ಕೋಮುಗಲಭೆಗಳು ನಡೆಯುತ್ತಿವೆ? ಜಾಗತಿಕ ಭಯೋತ್ಪಾದನೆಗೆ ಕಾರಣವಾಗುತ್ತಿರುವವರು ಮಕ್ಕಳ ಕೈಗೆ ಕಲ್ಲು ನೀಡಿ ದೇವರ ಹೆಸರಿನಲ್ಲಿ ಹಿಂಸೆಗೆ ಪ್ರೇರೇಪಿಸುತ್ತಿದ್ದಾರೆ. ಅಂಥವರಿಗೆ ನೋಟಿಸ್ ನೀಡಬೇಕೇ ಹೊರತು, ಸರ್ಕಾರ ಸುಮ್ಮನಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆ–2025 ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸರು ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
“ಈ ಮಸೂದೆಗೆ ಇನ್ನೂ ಕಾನೂನುಬದ್ಧತೆ ಸಿಕ್ಕಿಲ್ಲ. ಕಾನೂನಿನ ಅರಿವಿಲ್ಲದ ಪೊಲೀಸರಿಗೆ ಮೊದಲು ಕಾನೂನು ತಿಳಿಸುವ ಅಗತ್ಯವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಲು ಸರ್ಕಾರ ಹೊರಟಿದೆಯೇ?” ಎಂದು ಪ್ರಶ್ನಿಸಿದರು.
ತುರ್ತು ಪರಿಸ್ಥಿತಿ ಹೇರಿ ನಾಗರಿಕ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್ ಪಕ್ಷವೇ ಇದೀಗ ಜನರ ಬಾಯಿಗೆ ಬೀಗ ಹಾಕಲು ಹೊರಟಿದೆ ಎಂದು ಆರೋಪಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.



