ಬೆಂಗಳೂರು: ಹುಳಿಮಾವು ಪೊಲೀಸರು ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿದ್ದು, ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ. ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಗ್ಯಾಂಗ್ ದೆಹಲಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಲಿಂಕ್ ಕಳುಹಿಸಿ, ನಂತರ ನಿಯೋ ಸಿಸ್ಟಂ ಎಂಬ ಆಪ್ ಅನ್ನು ಇನ್ಸ್ಟಾಲ್ ಮಾಡಿಸುತ್ತಿದ್ದರು. ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿಸಿ ವಂಚನೆ ನಡೆಸಲಾಗುತ್ತಿತ್ತು.
ಪ್ರಕರಣ ಸಂಬಂಧ ಹುಳಿಮಾವು ಪೊಲೀಸರು ಇದುವರೆಗೆ 12 ಜನರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ ಸುಮಾರು 4500 ಬ್ಯಾಂಕ್ ಖಾತೆಗಳ ಮೂಲಕ 75 ಕೋಟಿ ರೂ. ಹಣ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ಸುಮಾರು 9 ಸಾವಿರಕ್ಕೂ ಹೆಚ್ಚು ಖಾತೆಗಳ ಮೂಲಕ ಅಕ್ರಮ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸಾವಿರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಪ್ರೇಮ್ ನತನೇಜಾ ಎಂಬಾತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಇಡೀ ಪ್ರಕರಣದ ಮಾಹಿತಿಯನ್ನು ಹುಳಿಮಾವು ಪೊಲೀಸರಿಂದ ಪಡೆದಿರುವ ಜಾರಿ ನಿರ್ದೇಶನಾಲಯ, ಸ್ವಾಮೀಜಿ ಡಾಟ್ ಕಾಮ್ ಎಂಬ ಗೇಮಿಂಗ್ ಆಪ್ ಮೂಲಕ ಅಕ್ರಮ ಹಣ ವಹಿವಾಟು ನಡೆಸಿರುವ ಹಿನ್ನಲೆಯಲ್ಲಿ PMLA ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.
ಇತ್ತ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆ, ಸೈಬರ್ ಕಮಾಂಡ್ನಿಂದಲೂ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸೈಬರ್ ವಂಚನೆ ಜಾಲದ ಸಂಪೂರ್ಣ ಬೇರು ಕತ್ತರಿಸಲು ಬಹುಮಟ್ಟದ ತನಿಖೆ ಮುಂದುವರಿದಿದೆ.



