ಬೆಂಗಳೂರು: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.
ಹೆಬ್ಬಗೋಡಿ ನಿವಾಸಿ ಪ್ರಶಾಂತ್ (28) ಮೃತ ಯುವಕ. ಅಪಘಾತದಲ್ಲಿ ರೋಶನ್ ಹೆಗ್ಗಡೆ (27) ಗಂಭೀರವಾಗಿ ಗಾಯಗೊಂಡಿದ್ದಾನೆ. ಭಾನುವಾರ ಕ್ರಿಕೆಟ್ ಪಂದ್ಯ ವೀಕ್ಷಣೆ ಮುಗಿದ ಬಳಿಕ ಸಂಜೆ ಇಬ್ಬರೂ ಸೇರಿ ಎಣ್ಣೆಪಾರ್ಟಿ ನಡೆಸಿದ್ದರು. ಈ ವೇಳೆ ಇಬ್ಬರ ನಡುವೆ ಕಿರಿಕ್ ನಡೆದಿದ್ದು, ಮನೆಗೆ ಹೊರಡುವ ಸಂದರ್ಭದಲ್ಲೂ ಕಾರಿನೊಳಗೆ ವಾಗ್ವಾದ ಮುಂದುವರಿದಿದೆ ಎನ್ನಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ರೋಶನ್ ಹೆಗ್ಗಡೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರಿಂದ ಆಕ್ರೋಶಗೊಂಡ ರೋಶನ್, ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ. ಪರಿಣಾಮವಾಗಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಶಾಂತ್ ಮೃತಪಟ್ಟಿದ್ದಾನೆ.
ಗಾಯಾಳು ರೋಶನ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭೀಕರ ಅಪಘಾತದ ದೃಶ್ಯ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.



