ಬೆಂಗಳೂರು: ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಪರಿಣಾಮವಾಗಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಬೆಳೆಯುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
77ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖಿಸಿರುವ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ರಾಜ್ಯ ಸರ್ಕಾರ ತನ್ನ ಆಡಳಿತದ ಕೇಂದ್ರಬಿಂದುವಾಗಿಸಿಕೊಂಡಿದೆ ಎಂದು ಹೇಳಿದರು.
ರಾಜ್ಯದ ಪ್ರತಿಯೊಂದು ಪ್ರದೇಶ ಹಾಗೂ ಸಮುದಾಯಗಳ ಧ್ವನಿಯನ್ನು ಆಲಿಸಿ, ನ್ಯಾಯಯುತ ಪರಿಹಾರ ನೀಡುವ ಕಾರ್ಯ ಸರ್ಕಾರ ಮಾಡುತ್ತಿದೆ. ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತ ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಜನಸಮುದಾಯಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನದ ಆಶಯದಂತೆ ಅತ್ಯಂತ ಹಿಂದುಳಿದ ವರ್ಗಗಳ ಬಲವರ್ಧನೆಗಾಗಿ ಹಾಗೂ ಜನರಿಗೆ ಆರ್ಥಿಕ ಚೈತನ್ಯ ಒದಗಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ವರ್ಷಕ್ಕೆ ಸುಮಾರು 1.12 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ 1.13 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ನೀಡಲಾಗಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು.
ಈ ಯೋಜನೆಗಳ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದು, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ. ಮಹಿಳೆಯರಲ್ಲಿ ಹೊಸ ಆರ್ಥಿಕ ಹಾಗೂ ಸಾಮಾಜಿಕ ಉತ್ಸಾಹ ಮೂಡಿದೆ. ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ಅವರು ಹೇಳಿದರು. ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದ ರಾಜ್ಯಪಾಲರು, ಸಾವಿರಾರು ವರ್ಷಗಳ ರಾಜಪ್ರಭುತ್ವ ಹಾಗೂ ಶತಮಾನಗಳ ವಸಾಹತುಶಾಹಿ ಆಡಳಿತಕ್ಕೆ ತೆರೆ ಎಳೆದ ದಿನವೇ ಜನವರಿ 26 ಎಂದು ಸ್ಮರಿಸಿದರು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪ್ರತಿಷ್ಠಾಪಿಸುವ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯೋತ್ಸವ ಎಂದು ಹೇಳಿದರು.
ಗಣತಂತ್ರ ವ್ಯವಸ್ಥೆಯ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ನಮ್ಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕೆಂದು ಹೇಳಿದರು. ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ಇವುಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡಾಗಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.



