ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ನಡುವೆ ಇಡೀ ದೇಶದ ಜನರ ಚಿತ್ತ ಇಂದು ದೆಹಲಿಯಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡಿನತ್ತ ನೆಟ್ಟಿದೆ. ವಿಶೇಷವಾಗಿ, ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಕ್ಷಿಪಣಿಗಳನ್ನು ಧ್ವಂಸಗೊಳಿಸಲು ಭಾರತ ಬಳಸಿದ್ದ ಎಸ್-400 ವಾಯುರಕ್ಷಣಾ ವ್ಯವಸ್ಥೆ ಇಂದು ಪರೇಡಿನಲ್ಲಿ ಪ್ರದರ್ಶಿಸಲ್ಪಡುತ್ತಿದೆ.
77ನೇ ಗಣರಾಜ್ಯೋತ್ಸವ ಪರೇಡಿನಲ್ಲಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹತ್ತಾರು ಟ್ಯಾಬ್ಲೋಗಳು ಭಾಗವಹಿಸಿವೆ. ಇದರ ಜೊತೆಗೆ ರಕ್ಷಣಾ ಇಲಾಖೆಯ ಟ್ಯಾಬ್ಲೋ ವಿಭಾಗದಲ್ಲಿ ಎಸ್-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆಯನ್ನು ವಿಶೇಷ ಆಕರ್ಷಣೆಯಾಗಿ ಪ್ರದರ್ಶಿಸಲಾಗುತ್ತಿದೆ.
ವಾಯುಪಡೆಯ ‘ಗೇಮ್ ಚೇಂಜರ್’
ಭಾರತೀಯ ವಾಯುಪಡೆಯ ಗೇಮ್ ಚೇಂಜರ್ ಎಂದೇ ಗುರುತಿಸಿಕೊಂಡಿರುವ ಎಸ್-400 ವಾಯುರಕ್ಷಣಾ ವ್ಯವಸ್ಥೆ, ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ದೀರ್ಘ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಹೊಡೆಯುವ ಈ ಕ್ಷಿಪಣಿ ವ್ಯವಸ್ಥೆ, ಪಾಕಿಸ್ತಾನದ ಮಿಸೈಲ್ ಹಾಗೂ ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಹೊಡೆದುರುಳಿಸಿತ್ತು. ಇದರ ಪರಿಣಾಮವಾಗಿ, ಎಸ್-400 ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲೂ ಬೇಡಿಕೆ ಹೆಚ್ಚಾಗಿದೆ.
ರಷ್ಯಾ ಜೊತೆಗೆ ಮಹತ್ವದ ಒಪ್ಪಂದ
2018ರಲ್ಲಿ ಭಾರತ, ಎಸ್-400 ವಾಯುರಕ್ಷಣಾ ವ್ಯವಸ್ಥೆಗಳ ಖರೀದಿಗಾಗಿ ರಷ್ಯಾ ಜೊತೆ 5.5 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ ಹೆಚ್ಚುತ್ತಿರುವ ಸೈನಿಕ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಪೂರೈಕೆಯಲ್ಲಿ ವಿಳಂಬವಾಗಿದ್ದರೂ, ಒಪ್ಪಂದದ ಅಡಿಯಲ್ಲಿ ಉಳಿದಿರುವ ಕೊನೆಯ ಎರಡು ಘಟಕಗಳು 2026 ಮತ್ತು 2027ರ ಅವಧಿಯಲ್ಲಿ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.



