ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಎರಡು ನಿಮಿಷ ಮೌನಾಚರಣೆ ನಡೆಸಿ, ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಕರ್ತವ್ಯ ಪಥದತ್ತ ತೆರಳಿದರು.
ಕರ್ತವ್ಯ ಪಥದಲ್ಲಿ ನಡೆದ ಪರೇಡ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಜರಿದ್ದರು. ಮೂರು ಸೇನಾ ಪಡೆಗಳ ಮುಖ್ಯಸ್ಥರೂ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಗಣ್ಯರ ಸ್ವಾಗತದ ಬಳಿಕ ಪ್ರಧಾನಿಗಳು ಅತಿಥಿಗಳೊಂದಿಗೆ ಮುಖ್ಯ ವೇದಿಕೆಗೆ ತೆರಳಿದರು. ರಾಷ್ಟ್ರಗೀತೆ ನುಡಿಸಿದ ನಂತರ ಗಣರಾಜ್ಯೋತ್ಸವ ಪರೇಡ್ ಅಧಿಕೃತವಾಗಿ ಆರಂಭವಾಯಿತು. ಸಂಪ್ರದಾಯದಂತೆ ಪ್ರಧಾನಿ ಹಾಗೂ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 105 ಎಂಎಂ ಲೈಟ್ ಫೀಲ್ಡ್ ಗನ್ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. 172 ಫೀಲ್ಡ್ ರೆಜಿಮೆಂಟ್ನ 1721 ಸೆರಿಮೋನಿಯಲ್ ಬ್ಯಾಟರಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ‘ವಂದೇ ಮಾತರಂ’ ಥೀಮ್ನಡಿ ನಡೆಯುತ್ತಿವೆ. ಪರೇಡ್ನಲ್ಲಿ ಆಪರೇಷನ್ ಸಿಂಧೂರ ಮಿಷನ್ ಪ್ರಮುಖ ಆಕರ್ಷಣೆಯಾಗಿದ್ದು, ದೇಶದ ಅಭೂತಪೂರ್ವ ಅಭಿವೃದ್ಧಿ, ಬಲಿಷ್ಠ ಸೈನಿಕ ಶಕ್ತಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಪ್ರದರ್ಶಿಸಲಾಗುತ್ತಿದೆ.



