ಗದಗ: ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಗಣರಾಜ್ಯೋತ್ಸವದ ಬಂಪರ್ ಗಿಫ್ಟ್ ಘೋಷಿಸಲಾಗಿದೆ. ಸಚಿವ ಎಚ್ ಕೆ ಪಾಟೀಲ್ ಅವರು ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಜನವರಿ 10 ರಂದು ಮನೆ ಪಾಯ ಅಗೆಯುವ ವೇಳೆ ಗದಗ ಜಿಲ್ಲೆಯ 466 ಗ್ರಾಮದ ಪುರಾತನ ಚಿನ್ನದ ಒಡವೆಗಳ ತಂಬಿಗೆ ಪತ್ತೆಯಾಗಿತ್ತು. ಈ ಅಮೂಲ್ಯ ಚಿನ್ನವನ್ನು ಪ್ರಜ್ವಲ್ ರಿತ್ತಿ ಕುಟುಂಬ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿತ್ತು. ಈ ಪ್ರಾಮಾಣಿಕತೆಗೆ ಸರ್ಕಾರ ವಿಶೇಷ ಗೌರವ ತೋರಿದೆ.
ಸಚಿವ ಎಚ್ ಕೆ ಪಾಟೀಲ್ ಅವರು ಘೋಷಣೆ ಮಾಡಿದಂತೆ, ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ ₹5 ಲಕ್ಷ ನಗದು ಸಹಾಯ ಮತ್ತು ತಾಯಿ ಕಸ್ತೂರೆವ್ವ ಅವರಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಮತ್ತು ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇಳೆ ಸಚಿವರು ನಿವೇಶನದ ಪ್ರಮಾಣ ಪತ್ರ ಮತ್ತು ಕಸ್ತೂರೆವ್ವ ಅವರಿಗೆ ಉದ್ಯೋಗ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಸರ್ಕಾರದ ಈ ನಿರ್ಧಾರವನ್ನು ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಾಮಾಣಿಕತೆಗೆ ದೊರಕಿದ ಅತ್ಯುತ್ತಮ ಗೌರವ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.



