ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ಅನುಮಾನ ಹುಟ್ಟಿಸುವ ಭೀಕರ ಘಟನೆ ನಡೆದಿದೆ. 32 ವರ್ಷದ ಗೃಹಿಣಿ ಪ್ರತಿಭಾ ಅವರ ಮೃತದೇಹ ಮನೆಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಗಿದ್ದು, ಈ ಪ್ರಕರಣ ಇದೀಗ ಕೊಲೆನಾ? ಆತ್ಮಹತ್ಯೆಯಾ? ಎಂಬ ಗಂಭೀರ ಅನುಮಾನಗಳನ್ನು ಹುಟ್ಟಿಸಿದೆ.
ಮೃತ ಮಹಿಳೆಯ ಪತಿ ನಂಜೇಗೌಡ ಮೇಲೆ ಕುಟುಂಬಸ್ಥರು ನೇರವಾಗಿ ಕೊಲೆ ಆರೋಪ ಮಾಡಿದ್ದಾರೆ. ಆದರೆ ನಂಜೇಗೌಡ ಮಾತ್ರ, “ಪತ್ನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ.
ಮನೆ ಒಳಗೇ ನಡೆದಿದೆಯೇ ಕ್ರೈಂ?
ಇಂದು ಬೆಳಿಗ್ಗೆ ನಂಜೇಗೌಡ ತನ್ನ ಅತ್ತಿಗೆ ಮನೆಯ ಬಳಿ ಬಂದು, “ಪ್ರತಿಭಾ ರೂಮ್ ಬಾಗಿಲು ತೆಗೆಯುತ್ತಿಲ್ಲ” ಎಂದು ಮಾಹಿತಿ ನೀಡಿದ್ದಾನೆ. ತಕ್ಷಣವೇ ಪ್ರತಿಭಾ ಸಹೋದರ ಪರಮೇಶ್ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆಯೊಳಗೆ ಪ್ರತಿಭಾ ಎಲ್ಲಿಯೂ ಕಾಣಿಸಿಲ್ಲ. ನಂತರ ಮನೆಯ ಆವರಣದಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಪರಿಶೀಲಿಸಿದಾಗ, ನೀರಿನೊಳಗೆ ಪ್ರತಿಭಾ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಕಂಡ ಕುಟುಂಬಸ್ಥರು ಶಾಕ್ ಆಗಿದ್ದು, ಘಟನೆ ಸ್ಥಳದಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನಂಜೇಗೌಡಗೆ ಪ್ರತಿಭಾ ಎರಡನೇ ಪತ್ನಿ. ಆರಂಭದಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ಮೊದಲ ಪತ್ನಿ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಇದು ಪೂರ್ವ ಯೋಜಿತ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಂಶಯ ಹೆಚ್ಚಿಸುವ ಸಂಗತಿ ಎಂದರೆ – ನಿನ್ನೆ ರಾತ್ರಿ ಪ್ರತಿಭಾ ತನ್ನ ಮನೆಯಲ್ಲಿದ್ದ ಕುಟುಂಬಸ್ಥರನ್ನು ಏಕಾಏಕಿ ಮನೆಗೆ ವಾಪಸ್ ಕಳುಹಿಸಿದ್ದಾಳೆ. ಆ ನಂತರ ರಾತ್ರಿ ಏನಾಯ್ತು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಘಟನೆಯ ಗಂಭೀರತೆಯನ್ನು ಗಮನಿಸಿ ಕೋಡಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಪ್ರತಿಭಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವೇ ಸತ್ಯ ಬಹಿರಂಗವಾಗಲಿದೆ.



