ತುಮಕೂರು: ಬೆಳಗಾವಿ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಸುಮಾರು 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ತನಿಖೆಯಿಂದ ಯಾವ ವರದಿ ಬರುತ್ತದೆಯೋ ಅದರ ನಂತರವೇ ಸಂಪೂರ್ಣ ಸತ್ಯ ತಿಳಿದುಬರಲಿದೆ ಎಂದು ಹೇಳಿದರು. ಪ್ರಸ್ತುತ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿದ್ದು, ನಮಗೂ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಆದರೆ ಆ ಮಾಹಿತಿಗಳಲ್ಲೂ ಕನ್‌ಫ್ಯೂಷನ್ ಇರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಪಿ ಅವರು ಮಹಾರಾಷ್ಟ್ರ ಡಿಜಿಪಿಯವರೊಂದಿಗೆ ಮಾತನಾಡಿದ್ದು, ಕೆಲವೊಂದು ಮಾಹಿತಿಗಳನ್ನು ಮಹಾರಾಷ್ಟ್ರ ಪೊಲೀಸರು ಹಂಚಿಕೊಂಡಿದ್ದಾರೆ. ಆದರೆ ತನಿಖೆಯನ್ನು SIT ಕೈಗೆತ್ತಿಕೊಂಡಿರುವುದರಿಂದ, ತನಿಖೆ ಪೂರ್ಣಗೊಂಡು ಹೊರಬರುವ ತನಕ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಇಲ್ಲಿಯವರೆಗೆ ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಾವಿ ಪೊಲೀಸರು ಸೇರಿದಂತೆ ಯಾವುದೇ ಕರ್ನಾಟಕ ಪೊಲೀಸ್ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.



