ಬೆಳಗಾವಿ: ಚೋರ್ಲಾ ಘಾಟ್ ಬಳಿ ನಡೆದ 400 ಕೋಟಿ ರೂ. ರಾಬರಿ ಪ್ರಕರಣ ಇದೀಗ ಕೇವಲ ಕ್ರೈಂ ಕೇಸ್ ಆಗಿಯೇ ಉಳಿಯದೆ, ರಾಜಕೀಯ ತಲ್ಲಣಕ್ಕೆ ಕಾರಣವಾಗುವ ಮಟ್ಟಕ್ಕೆ ತಲುಪಿದೆ. ಪ್ರಕರಣದಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಸಂಪರ್ಕವಿದೆ ಎಂಬ ಶಂಕೆಗಳು ಹೆಚ್ಚಾಗುತ್ತಿದ್ದು, ತನಿಖೆಯ ದಿಕ್ಕು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.
ಈ ನಡುವೆ ಮಹಾರಾಷ್ಟ್ರ ಪೊಲೀಸರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಹೊರಿಸಿದ್ದಾರೆ. “ಘಟನೆ ನಡೆದ ಸ್ಥಳ ಯಾವ ರಾಜ್ಯ ವ್ಯಾಪ್ತಿಗೆ ಸೇರಿದೆ ಎಂಬುದೇ ಸ್ಪಷ್ಟವಾಗಿಲ್ಲ. ದೂರು ಬಂದರೆ ನಮ್ಮ ಪೊಲೀಸರು ತನಿಖೆ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಏನಾಗಿದೆ ಎಂಬುದು ಇನ್ನೂ ಗೊತ್ತಿಲ್ಲ” ಎಂದು ಅವರು ಹೇಳಿದ್ದಾರೆ. 400 ಕೋಟಿ ಕಾಂಗ್ರೆಸ್‌ಗೆ ಸೇರಿದೆ ಎಂಬ ಮಹಾರಾಷ್ಟ್ರ ಸಿಎಂ ಆರೋಪಕ್ಕೂ ಅವರು ಪ್ರಶ್ನೆ ಎತ್ತಿದ್ದಾರೆ.
ಇತ್ತ, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹಣ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ನಾಯಕರಿಗೆ ಮೊದಲೇ ಮಾಹಿತಿ ಹೇಗೆ ಗೊತ್ತಾಯಿತು? ಇದು ಲೀಗಲ್ ಹಣ ಆಗಲು ಸಾಧ್ಯವೇ ಇಲ್ಲ. ಸಂಪೂರ್ಣ ತನಿಖೆಯಾಗಬೇಕು. ತಪ್ಪಿತಸ್ಥರು ಹೊರಬರಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರಕರಣ ಇದೀಗ ಕೇವಲ ದರೋಡೆ ಅಲ್ಲ, ಬಹುರಾಜ್ಯ ಹಣದ ಜಾಲವೊಂದರ ಸುಳಿವು ನೀಡುತ್ತಿರುವಂತೆ ಕಾಣಿಸುತ್ತಿದ್ದು, ಎಸ್‌ಐಟಿ ತನಿಖೆಯಿಂದ ಇನ್ನಷ್ಟು ಸ್ಫೋಟಕ ವಿಚಾರಗಳು ಹೊರಬೀಳುವ ಸಾಧ್ಯತೆ ಇದೆ.



