ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ ಪ್ರೇಮ ಸಂಬಂಧವೇ ರಕ್ತಪಾತದ ಅಂತ್ಯ ಕಂಡ ಭೀಕರ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ನಡೆದ ಜಗಳದ ಪರಿಣಾಮವಾಗಿ ವಿವಾಹಿತ ಪ್ರಿಯತಮೆಯನ್ನು ಕತ್ತು ಕೊಯ್ದು ಕೊಂದ ಪ್ರಿಯಕರ, ಕೆಲವೇ ಗಂಟೆಗಳಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತಳಾದ 40 ವರ್ಷದ ಸಲ್ಮಾ, ತನ್ನ ಪ್ರಿಯಕರ 46 ವರ್ಷದ ಬಾಬಾಜಾನ್‌ನೊಂದಿಗೆ ಕಳೆದ ಆರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಇಬ್ಬರ ಮಧ್ಯೆ ತೀವ್ರ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಬಾಬಾಜಾನ್ ಚಾಕುವಿನಿಂದ ಸಲ್ಮಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಅಲ್ಲಿಂದ ಪಲಾಯನ ಮಾಡಿದ ಆರೋಪಿ ಬಾಬಾಜಾನ್, ಚೇಳೂರಿನ ತನ್ನ ನಿವಾಸಕ್ಕೆ ತೆರಳಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಲ್ಮಾಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದರೆ, ಬಾಬಾಜಾನ್‌ಗೆ ಮೂರು ಮಕ್ಕಳು ಇದ್ದರೂ ಹೆಂಡತಿ ಹಾಗೂ ಮಕ್ಕಳು ಆತನನ್ನು ಬಿಟ್ಟು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಪ್ರೇಮ ಸಂಬಂಧದ ವೈಷಮ್ಯದಿಂದ ನಡೆದ ಡಬಲ್ ಡೆತ್ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.



