ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಪುನೀತ್‌ರೆಡ್ಡಿ ಎನ್.ಎ ಜ.23ರಂದು ಹೈದ್ರಾಬಾದ್‌ನಲ್ಲಿ ನಡೆದ ಸೌತ್ ಇಂಡಿಯಾ ಸೈನ್ಸ್ ಫೆಸ್ಟ್ (ಎಸ್‌ಐಎಸ್‌ಎಫ್) ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ಇಸ್ರೋ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಭಾರತ ಸ್ಕೌಟ್ ಮತ್ತು ಗೈಡ್ಸ್, ಆರ್ಯಭಟ, ಡ್ರೋಮ್, ಇಂಟರ್ನ್ಯಾಷನಲ್ ಲಯನ್ಸ್, ಭಾರತ ಸೇವಾದಳ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮತ್ತು ಕಲೆಗಳ ಪ್ರಗತಿ ಸಂಸ್ಥೆ ಸಹಯೋಗದಲ್ಲಿ ಕಳೆದ ವರ್ಷ ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ್ದಾನೆ.
ರಾಜ್ಯಪಾಲರಾದ ಥಾವರಚಂದ ಗೆಹಲೋಟ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದರು. ಗದಗ ಜಿಲ್ಲಾಡಳಿತದಿಂದಲೂ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಗದಗನಲ್ಲಿ ನಡೆದ ಗದಗ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದಲ್ಲಿ `ಬಾಲ ಶರಣಸಿರಿ’ ಪ್ರಶಸ್ತಿ ನೀಡಲಾಗಿದೆ. ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯ ಎನ್.ಕೆ. ಹತ್ತಿಕಾಳ, ವಿಜ್ಞಾನ ಶಿಕ್ಷಕಿ ಎಸ್.ಡಿ. ಕರೆಗೌಡ್ರ ಮತ್ತು ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.



