ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತದ ಪ್ರತಿ ಮನೆಮನೆಯಲ್ಲಿಯೂ ಸ್ವದೇಶಿ ಮಂತ್ರ ರಿಂಗಣಿಸುತ್ತಿರಬೇಕು. ಇದರಿಂದ ಭಾರತದ ಉದ್ಧಾರವಾಗಲು ಸಾಧ್ಯ. ಇಲ್ಲವಾದರೆ ಎಲ್ಲವನ್ನೂ ಪರದೇಶಕ್ಕೆ ಕೊಟ್ಟು ಒಂದಿನ ನಾವು ಪಾಪರ್‌ಗಳಾಗಬೇಕಾಗುತ್ತದೆ ಎಂದು ಧರ್ಮ ಜಾಗರಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ದಿಲೀಪ್ ವರ್ಣೇಕರ್ ಹೇಳಿದರು.
ಪಟ್ಟಣದ ಹಿರೇಮಠ ಸಭಾಭವನದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸಲು ಹಿಂದೂಗಳೇ ಕಾರಣ. ನಮಗೆ ಒಬ್ಬರು-ಇಬ್ಬರು ಮಕ್ಕಳು ಸಾಕೆಂದು ನಿರ್ಧರಿಸುತ್ತ ಹೋದರೆ ಒಂದು ದಿನ ನಾವೇ ಈ ದೇಶದಲ್ಲಿ ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಈ ಎಚ್ಚರಿಕೆ ಎಲ್ಲರಲ್ಲಿಯೂ ಇರಲಿ. ಆದ್ದರಿಂದ ಹಿಂದೂಗಳು ಕನಿಷ್ಠ ಮೂರು-ನಾಲ್ಕು ಮಕ್ಕಳನ್ನಾದರೂ ಪಡೆಯಬೇಕು. ಇದರಿಂದ ನಮ್ಮ ಹಿಂದೂಸ್ತಾನವನ್ನು ನಮ್ಮದನ್ನಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು.
ದೂರದರ್ಶನದಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನಾವೇನಾದರೂ ವಿದೇಶಿ ವಸ್ತುಗಳ ಖರೀದಿಗೆ ಮುಗಿಬಿದ್ದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯುತ್ತದೆ. ಆದ್ದರಿಂದ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬಳಸುವತ್ತ ಹೆಚ್ಚಿನ ಗಮನ ನೀಡಬೇಕು. ನಮ್ಮ ದೇಶವನ್ನು ಶ್ರೀಮಂತಿಕೆಯ ರಾಷ್ಟ್ರ ಮಾಡಬೇಕು. ಮಹಿಳೆಯರು ಕ್ರಿಯಾಶೀಲರಾದರೆ ಹಿಂದೂ ಸಮಾಜವನ್ನು ಕಟ್ಟಲು ಯಾವುದೇ ತೊಂದರೆಯಿಲ್ಲ. ಜಗತ್ತಿನ 40 ದೇಶಗಳಲ್ಲಿ ಸಂಘದ ಶಾಖೆಗಳಿವೆ. ಹಿಂದೂಗಳನ್ನು ಒಟ್ಟುಗೂಡಿಸಲು ಹೋರಾಡಿ ಯಶಸ್ವಿಯಾದವರು ಡಾ. ಹೆಡಗೆವಾರರು ಎಂದು ಹೇಳಿದರು.
ಬೇರೆ ಧರ್ಮದವರು ಯಾರೇ ಭಾರತವನ್ನು ಆಳಿದರೂ ಅವರಿಗೆ ಭಾರತವನ್ನು ತಮ್ಮ ಧರ್ಮದ ದೇಶವನ್ನಾಗಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಹಿಂದುತ್ವ ಈ ದೇಶದಲ್ಲಿ ಅಷ್ಟೊಂದು ಗಟ್ಟಿಯಾಗಿದೆ. ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ಹೊಡೆದೋಡಿಸಿ ಅಪ್ಪ-ಅಮ್ಮ ಸಂಸ್ಕೃತಿಯನ್ನು ಜಾರಿಗೆ ತಂದರೆ ದೇಶದ ಸಂಸ್ಕೃತಿ ಇನ್ನಷ್ಟು ಹೆಚ್ಚುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಸಂಘದ ನೂರು ವರ್ಷಗಳ ಕಾರ್ಯಕ್ರಮ ಶ್ಲಾಘನೀಯ. ಮುಖ್ಯ ವಕ್ತಾರರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಹಿಂಸೆಯಿಂದ ದೂರವಿದ್ದು ಅಹಿಂಸೆಯಿಂದ ಜೀವನ ನಡೆಸುವವನೇ ನಿಜವಾದ ಹಿಂದೂ. ಯಾರೇ ಈ ದೇಶವನ್ನು ನಾಶ ಮಾಡಲು, ಮತಾಂತರ ಮಾಡಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಭಾರತೀಯರು ಭೋಗ ಜೀವಿಗಳಲ್ಲ, ಅವರು ತ್ಯಾಗ ಜೀವಿಗಳು ಮತ್ತು ಯೋಗ ಜೀವಿಗಳು. ಮನುಸ್ಮೃತಿ ಆಗಿನ ಕಾಲಕ್ಕೆ ಸೂಕ್ತವಾಗಿತ್ತು. ಅದರಲ್ಲಿನ ಅನೇಕ ಉತ್ತಮೋತ್ತಮ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಸುಮ್ಮನೆ ಅದನ್ನು ಟೀಕಿಸುವುದು ಬೇಡ ಎಂದರು.
ಕಾರ್ಯಕ್ರಮದಲ್ಲಿ ರವಿ ದಂಡಿ, ಉಮೇಶ ಪಾಟೀಲ, ಆರ್.ಜಿ. ಪಾಟೀಲ, ಉಮೇಶ ಸಂಗನಾಳಮಠ, ಮುತ್ತಣ್ಣ ಪಲ್ಲೇದ, ರಾಜಶೇಖರ ವಂಕಲಕುಂಟಿ, ಹೇಮಗಿರೀಶ ಹಾವನಾಳ, ಸುತ್ತಲಿನ ಗ್ರಾಮಗಳ ಪ್ರಮುಖರನೇಕರು ಪಾಲ್ಗೊಂಡಿದ್ದರು. ಗೀತಾ ಭೋಪಳಾಪೂರ ಪ್ರಾರ್ಥಿಸಿದರು. ಜಗದೀಶ ಸಂಕನಗೌಡ್ರ ಸ್ವಾಗತಿಸಿದರು. ಅರ್ಚನಾ ಕೊಂಡಿ ಸಮಿತಿಯ ಸದಸ್ಯರನ್ನು ಪರಿಚಯಿಸಿದರು. ಸಮಿತಿ ಅಧ್ಯಕ್ಷ ಬಸವರಾಜ ವಂಕಲಕುಂಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಘುನಾಥ ಕೊಂಡಿ ನಿರೂಪಿಸಿದರು. ಡಾ. ಆರ್.ಕೆ. ಗಚ್ಚಿನಮಠ ವಂದಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಸಹ ಸಂಘದ ಧೋರಣೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಂಘವು ಜಾತಿ-ಜಾತಿಗಳಲ್ಲಿನ ವ್ಯತ್ಯಾಸವನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿದೆ. ಹಿಂದೂ ಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಸ್ವಾಮಿ ವಿವೇಕಾನಂದರು ವಿಶ್ವಧರ್ಮಸಮ್ಮೇಳನದಲ್ಲಿ ಮಾತನಾಡಿ ಹಿಂದೂ ಧರ್ಮದ ಪ್ರತಿಪಾದನೆ ಮಾಡಿದ್ದು ಇದಕ್ಕೆ ಕಾರಣ. ಇನ್ನಾದರೂ ನಾವು ಒಗ್ಗಟ್ಟಾಗದಿದ್ದರೆ ಬಿಕ್ಕಟ್ಟನ್ನು ಸೃಷ್ಟಿಸಿ ಹಿಂದೂ ರಾಷ್ಟ್ರವನ್ನು ಛಿದ್ರಛಿದ್ರ ಮಾಡಲು ದುಷ್ಟ ಶಕ್ತಿಗಳು ಕಾಯುತ್ತಿವೆ. ಅದಕ್ಕಾಗಿ ಹಿಂದೂಗಳೆಲ್ಲರೂ ಎಚ್ಚರವಾಗಿರಬೇಕೆಂದು ದಿಲೀಪ್ ಹೇಳಿದರು.



