ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ದ್ವಜಾರೋಹಣ ನೆರವೇರಿಸಿ, ಸಂವಿಧಾನದ ಮಹತ್ವ ಮತ್ತು ಸರ್ಕಾರಿ ನೌಕರರ ಕರ್ತವ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು.
ನಾವು ಕಾನೂನು ಹಾಕಿಕೊಂಡು ನಡೆಯುತ್ತಿರುವವರು. ನಾವು ಹೇಗೆ ಕಾನೂನಾತ್ಮಕವಾಗಿ ಬದುಕಬೇಕು ಎಂಬುದನ್ನು ಸಂವಿಧಾನ ನಮಗೆ ತಿಳಿಸುತ್ತದೆ. ವೇದಗಳಲ್ಲಿ ಜೀವನದ ಸಾರಾಂಶ ಇರುವಂತೆ, ಸಂವಿಧಾನದಲ್ಲೂ ನಮ್ಮ ಜೀವನದ ಮೌಲ್ಯಗಳು ಅಡಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ವ್ಯವಸ್ಥೆಯಲ್ಲಿ ಸರ್ಕಾರದ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಕಾರ್ಯಾಂಗದ ಮೇಲಿದೆ. ನಾವು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇವೆ. ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು, ಸಾರ್ವಜನಿಕರಿಗೆ ಸಹಾಯ ಮಾಡಬೇಕು. ನೌಕರಿಯಲ್ಲಿ ಅಹಂ ಹಾಗೂ ಜಂಭ ಬೇಡ. ನಾಗರಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹಾರ ಒದಗಿಸುವ ಮನೋಭಾವ ಇರಬೇಕು ಎಂದು ಸಲಹೆ ನೀಡಿದರು.
ಕಾನೂನು ಜಾರಿ ಮಾಡುವವರು ನಾವೇ ಆಗಿರುವುದರಿಂದ, ಕಾನೂನಿಗೆ ಮಾನವೀಯತೆಯ ನೆಲೆ ಸೇರಿಸಿ ಕಾರ್ಯನಿರ್ವಹಿಸಬೇಕು. ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಜನಸೇವೆ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



