ವಿಜಯಸಾಕ್ಷಿ ಸುದ್ದಿ, ರೋಣ: ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಕುರಿತು ಕೆಲವರು ಮಾತನಾಡುತ್ತಾರೆ. ಆದರೆ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ ಎಂಬ ಸತ್ಯವನ್ನು ಅವರು ಮರೆತಿದ್ದಾರೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಭಾರತ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಇಡೀ ವಿಶ್ವದಲ್ಲಿ ಭಾರತ ದೇಶದ ಸಂವಿಧಾನ ಮಾದರಿಯಾಗಿದೆ. ಇಂದಿನ ಯುವ ಪೀಳಿಗೆ ಡಾ. ಬಿ.ಆರ್. ಅಂಬೇಡ್ಕರರು ದೇಶದ ಬಗ್ಗೆ ಇಟ್ಟುಕೊಂಡ ಚಿಂತನೆಗಳನ್ನು ಮೆಲುಕು ಹಾಕಬೇಕು. ಮುಖ್ಯವಾಗಿ, ದೇಶದ ಹಿತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಸಂವಿಧಾನದ ಮಹತ್ವ ತಿಳಿಯಲಿದೆ ಎಂದರು.
ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಉತ್ತಮ ರಸ್ತೆ ಸಂಪರ್ಕ, ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನವನ್ನು ನೀಡಲಾಗಿದ್ದು, ರೋಣ ಪಟ್ಟಣಕ್ಕೆ ಡಿಪ್ಲೋಮಾ ಕಾಲೇಜನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ತಹಸೀಲ್ದಾರ ನಾಗರಾಜ ಕೆ ಧ್ವಜಾರೋಹಣ ನೆರವೇರಿಸಿದರು. ತಾ.ಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ, ಕೃಷಿ ಇಲಾಖೆಯ ಎಸ್.ಎಫ್. ತಹಸೀಲ್ದಾರ, ಪಿಎಸ್‌ಐ ಪ್ರಕಾಶ ಬಣಕಾರ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಮಲ್ಲಿಕಾರ್ಜುನ ಹುಣಸಿ, ಬಿಇಒ ಅರ್ಜುನ ಕಂಬೋಗಿ, ಅಕ್ಷರದಾಸೋಹಾಧಿಕಾರಿ ಕೆ.ಎಲ್. ನಾಯಕ, ಸಂಜಯ ದೊಡ್ಡಮನಿ ಸೇರಿದಂತೆ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ರೋಣ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. 50 ಕೋಟಿ ರೂಗಳ ವೆಚ್ಚದಲ್ಲಿ ಜೆಟಿಟಿಸಿ ಕಾಲೇಜನ್ನು ಆರಂಭಿಸಲಾಗಿದ್ದು, ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ರೋಣ ತಾಲೂಕು ಅನ್ನದಾತ ರೈತರನ್ನು ಹೆಚ್ಚಾಗಿ ಹೊಂದಿದೆ. ಇದನ್ನು ಮನಗಂಡು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದ್ದು, ಜಿಗಳೂರ ಕೆರೆಗೆ ನೀರನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಯ ಅಂದವನ್ನು ಹೆಚ್ಚಿಸಲು 5 ಕೋಟಿ ರೂ ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.



