ಬೆಂಗಳೂರು ಗ್ರಾಮಾಂತರ: ವೃದ್ಧರನ್ನೇ ಟಾರ್ಗೆಟ್ ಮಾಡಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶ್ರೀನಿವಾಸಮೂರ್ತಿ (31) ಹಾಗೂ ವೆಂಕಟೇಶ (23) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣಗಳಲ್ಲಿಯೂ ಬೇಕಾಗಿದ್ದವರು ಎನ್ನಲಾಗಿದೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಬಂಧನದ ವೇಳೆ ಆರೋಪಿಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಕಳವಾದ ಚಿನ್ನವನ್ನು ಮಾಲೀಕರಿಗೆ ವಾಪಸ್ ನೀಡಿದ್ದು, ಚಿನ್ನವನ್ನು ಮರಳಿ ಪಡೆದ ದೂರುದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಚೈನ್ ಸ್ನ್ಯಾಚಿಂಗ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು, ಮುಂದಿನ ದಿನಗಳಲ್ಲಿ ಇಂತಹ ಅಪರಾಧಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.



