ಗದಗ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಅಡ್ನೂರ ಉರುಸ್ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಗದಗ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ.
ಗದಗ ಗ್ರಾಮೀಣ ಠಾಣೆಯ ಸಿಬ್ಬಂದಿಗಳಾದ ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಎಂಬುವವರೇ ಮಾನವೀಯತೆ ಮೆರೆದ ಸಿಬ್ಬಂದಿಗಳು.
ಡಿಸೆಂಬರ್ 31ರಂದು ಅಡ್ನೂರ ಗ್ರಾಮದಿಂದ ಬೆಳಗಿನ ಜಾವ ಅಲ್ಲಾಸಾಬ ಹುಸೇನ್ ಸಾಬ ದೊಡ್ಡಮನಿ (60) ಎಂಬುವವರು ನಾಪತ್ತೆಯಾಗಿದ್ದರು. ಅಂದಿನಿಂದ ಕುಟುಂಬದ ಸದಸ್ಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.

ಸೋಮವಾರ ಗದಗ ತಾಲೂಕಿನ ಬಳಗಾನೂರ ಚಿಕೆನಕೊಪ್ಪದ ಶರಣರ ಜಾತ್ರೆಯ ಬಂದೋಬಸ್ತ್ಗೆ ಹೊರಟಿದ್ದ ಇಬ್ಬರು ಸಿಬ್ಬಂದಿ ದಾರಿಯ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಮಾತನಾಡಿಸಿದ್ದಾರೆ. ಆದರೆ ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಿತ್ರಾಣಗೊಂಡಿದ್ದಾತನನ್ನು ಬಳಗಾನೂರಿಗೆ ಕರೆದುಕೊಂಡು ಹೋಗಿ ಜ್ಯೂಸ್ ಕುಡಿಸಿದ್ದಾರೆ. ಇದರಿಂದಾಗಿ ಚೇತರಿಸಿಕೊಂಡ ಆ ವ್ಯಕ್ತಿ ತೊದಲುತ್ತಾ, ಅಸ್ಪಷ್ಟವಾಗಿ ಸಣ್ಣ ಧ್ವನಿಯಲ್ಲಿ ಮಾತನಾಡಿದಾಗ ಆತ ಯಾರು, ಎಲ್ಲಿಯವನು ಎಂಬ ಮಾಹಿತಿ ತಿಳಿದಿಲ್ಲ. ನಂತರ ಬಿಳೆಹಾಳೆ ಹಾಗೂ ಪೆನ್ನು ಕೊಟ್ಟ ಪೊಲೀಸರು, ಆ ಹಾಳೆಯಲ್ಲಿ ಬರೆಯಲು ಹೇಳಿದಾಗ ಆತನ ಹೆಸರು, ತನ್ನ ಊರಿನ ಹೆಸರು ಬರೆದಿದ್ದಾನೆ. ಆಗ ಮಾಹಿತಿ ಕಲೆ ಹಾಕಿದ ಪೊಲೀಸರು, ಅಣ್ಣಿಗೇರಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾದ ಬಗ್ಗೆ ತಿಳಿದುಕೊಂಡು ಅವರ ಕುಟುಂಬದ ಸದಸ್ಯರನ್ನು ಕರೆಸಿ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಅವರ ಈ ಕಾರ್ಯಕ್ಕೆ ವೃದ್ಧ ಅಲ್ಲಾಸಾಬನ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



