HomeKarnataka Newsಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ: ಹೈಕೋರ್ಟ್ ಸ್ಪಷ್ಟನೆ

ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ: ಹೈಕೋರ್ಟ್ ಸ್ಪಷ್ಟನೆ

For Dai;y Updates Join Our whatsapp Group

Spread the love

ಬೆಂಗಳೂರು: ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೆಷನ್ಸ್ ಕೋರ್ಟ್‌ಗಳಿಗೆ ಅಂತಹ ಶಿಕ್ಷೆ ವಿಧಿಸುವ ಅಧಿಕಾರ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮೂರೂವರೆ ವರ್ಷದ ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿಗೆ ಸಾಯುವವರೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರುದ್ರೇಶ್ (28) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ, ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯ ಸ್ವರೂಪವನ್ನು ತಿದ್ದುಪಡಿ ಮಾಡಿದೆ.

ಯಾವುದೇ ವಿನಾಯಿತಿ ಇಲ್ಲದೆ ಮರಣದಂಡನೆಗೆ ಬದಲಾಗಿ ಸಾಯುವವರೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಸೇರಿದ್ದು, ಆ ಅಧಿಕಾರ ಸೆಷನ್ಸ್ ಕೋರ್ಟ್‌ಗೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯ ದೋಷ ಸಾಬೀತಾಗಿರುವುದರಿಂದ, 2017ರ ನವೆಂಬರ್ 27ರಂದು ಸೆಷನ್ಸ್ ಕೋರ್ಟ್ ನೀಡಿದ್ದ ದೋಷನಿರ್ಣಯವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿದ್ದ ಆದೇಶವನ್ನು ರದ್ದುಪಡಿಸಿ, ಅದರ ಬದಲಾಗಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

 ಪ್ರಕರಣದ ಹಿನ್ನೆಲೆ

ಶಿವಮೊಗ್ಗ ಜಿಲ್ಲೆಯ ಹೊಸಮನೆ ಗ್ರಾಮದ ನಿವಾಸಿ ರುದ್ರೇಶ್, ಹೊಸನಗರದ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೀಡಾದ ಮಗುವಿನ ತಾಯಿ ಪ್ರಕರಣದ ದೂರುದಾರೆಯಾಗಿದ್ದು, ಆ ಮಠದ ಭಕ್ತೆಯಾಗಿದ್ದರು. ಮಠದ ವ್ಯವಹಾರಗಳಲ್ಲಿ ದೂರುದಾರೆ ಮತ್ತು ಆಕೆಯ ತಾಯಿ ಸಲಹೆ ನೀಡುತ್ತಿದ್ದುದರಿಂದ, ರುದ್ರೇಶ್ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

2017ರ ಏಪ್ರಿಲ್ 10ರಂದು ಮಠದ ಕಾರ್ಯಕ್ರಮವೊಂದರಲ್ಲಿ ದೂರುದಾರೆ ತನ್ನ ಮೂರೂವರೆ ವರ್ಷದ ಗಂಡು ಮಗುವಿನೊಂದಿಗೆ ಕುಟುಂಬ ಸದಸ್ಯರ ಜತೆಗೆ ಭಾಗವಹಿಸಿದ್ದರು. ಆ ದಿನ ರಾತ್ರಿ ಮಠದಲ್ಲೇ ಊಟ ಮಾಡಿ ಮಲಗಿದ್ದ ವೇಳೆ, ಬೆಳಿಗ್ಗೆ 5.30ರ ಸುಮಾರಿಗೆ ಎಚ್ಚರಗೊಂಡಾಗ ಮಗು ಪಕ್ಕದಲ್ಲಿರಲಿಲ್ಲ. ನಂತರ ಮಗು ಶವವಾಗಿ ಪತ್ತೆಯಾಗಿತ್ತು.

ಈ ಸಂಬಂಧ ಹೊಸನಗರ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಆರೋಪಿಯಾದ ರುದ್ರೇಶ್ ಮಗುವನ್ನು ಅಪಹರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2017ರ ನವೆಂಬರ್ 27ರಂದು ಸೆಷನ್ಸ್ ಕೋರ್ಟ್ ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಿ, ನವೆಂಬರ್ 30ರಂದು ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಯು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!