ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ 400 ಕೋಟಿ ರೂ. ಕಂಟೇನರ್ ದರೋಡೆ ಪ್ರಕರಣದಲ್ಲಿ ಕೊನೆಗೂ ಮಹತ್ವದ ಬ್ರೇಕ್ಥ್ರೂ ಸಿಕ್ಕಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ಚಾಲಕರು ಎಸ್ಐಟಿ ವಶಕ್ಕೆ ಬಿದ್ದಿದ್ದಾರೆ.
ಚೋರ್ಲಾ ಘಾಟ್ ಬಳಿ ನಾಪತ್ತೆಯಾಗಿದ್ದ ಕಂಟೇನರ್ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದಿದ್ದು, ಬಂಧಿತರಾದ ಚಾಲಕರ ವಿಚಾರಣೆಯಿಂದ ದರೋಡೆ ಹಿಂದೆ ಇರುವ ಅಂತರರಾಜ್ಯ ಜಾಲ ಬಯಲಾಗುವ ಸಾಧ್ಯತೆ ಗಟ್ಟಿಯಾಗಿದೆ.
ಈ ಹಿಂದೆ ಸಂದೀಪ್ ಪಾಟೀಲ್ ಎಂಬಾತ ನೀಡಿದ್ದ ಸ್ಫೋಟಕ ಹೇಳಿಕೆಯಲ್ಲಿ, ಹಣ ಉದ್ಯಮಿ ಕಿಶೋರ್ ಸೇಠ್ ಹಾಗೂ ವಿರಾಟ್ ಗಾಂಧಿ ಕೈವಾಡವಿದೆ ಎಂದು ಆರೋಪಿಸಿದ್ದ. ಜೊತೆಗೆ, ಹಣ ಗುಜರಾತ್ನ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಕೂಡಾ ಸಿಕ್ಕಿತ್ತು.
ಈಗ ಚಾಲಕರ ಬಂಧನದೊಂದಿಗೆ, ಹಣದ ಮೂಲ ಯಾರದ್ದು? ನಿಜಕ್ಕೂ ದರೋಡೆ ನಡೆದಿತ್ತೇ ಅಥವಾ ಒಳಒಪ್ಪಂದವೇ? ಯಾರ್ಯಾರು ಇದರ ಹಿಂದೆ ಇದ್ದಾರೆ? ಎಂಬ ಅತಿ ಸಂವೇದನಾಶೀಲ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.



