ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಕೇನ್ ರಿಚರ್ಡ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2023ರಲ್ಲಿ ಗಾಯದ ಕಾರಣ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದ ರಿಚರ್ಡ್ಸನ್, ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಆದರೆ ಇದೀಗ 34ನೇ ವಯಸ್ಸಿನಲ್ಲಿ ನಿವೃತ್ತಿ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಆಸ್ಟ್ರೇಲಿಯಾ ಪರ 25 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೇನ್ ರಿಚರ್ಡ್ಸನ್, ಒಟ್ಟು 1312 ಎಸೆತಗಳನ್ನು ಎಸೆದು 1240 ರನ್ ನೀಡಿದ್ದು, ಈ ಅವಧಿಯಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಅವರು ಆಸ್ಟ್ರೇಲಿಯಾ ಪರ ಯಾವುದೇ ಏಕದಿನ ಪಂದ್ಯವನ್ನೂ ಆಡಿರಲಿಲ್ಲ ಎಂಬುದು ಗಮನಾರ್ಹ.
ಇನ್ನು ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ರಿಚರ್ಡ್ಸನ್, 36 ಪಂದ್ಯಗಳಲ್ಲಿ 756 ಎಸೆತಗಳನ್ನು ಎಸೆದು 1056 ರನ್ ನೀಡಿ 45 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ಲ್ಲೂ ಕೇನ್ ರಿಚರ್ಡ್ಸನ್ ಕಣಕ್ಕಿಳಿದಿದ್ದರು. ಐಪಿಎಲ್‌ನಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿರುವ ಅವರು, 335 ಎಸೆತಗಳಲ್ಲಿ 472 ರನ್ ನೀಡಿ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಅವರು ಆಡಿದ್ದರು.
ವಿಶೇಷವಾಗಿ 2021ರಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದ ಬಳಿಕ ಅವರು ಐಪಿಎಲ್‌ನಿಂದಲೂ ದೂರವಾಗಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.



