ಬೆಂಗಳೂರು: ಕಮಿಷನ್, ಭ್ರಷ್ಟಾಚಾರ, ಲೂಟಿ ಮತ್ತು ದುಂಡಾವರ್ತಿಯ ಸರಕಾರವೇ ಇವತ್ತು ರಾಜ್ಯವನ್ನಾಳುತ್ತಿದೆ ಎಂದು ವಿಧಾನಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಟೀಕೆ ನಡೆಸಿದರು.
ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಆರೋಪಗಳನ್ನು ನಾವು ಮಾತ್ರ ಮಾಡುತ್ತಿಲ್ಲ, ರಾಜ್ಯದ ಜನರೇ ಈ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿಯೇ ನಮ್ಮ ಕೆಲವು ಸ್ನೇಹಿತರಿದ್ದಾರೆ. ಅವರಿಗೂ ಈ ಸರಕಾರದ ನಡೆ ಬೇಸರ ತಂದಿದೆ. ಫೋನ್ ಮಾಡಿದಾಗಲೂ ‘ಬಿಡಬೇಡ್ರಿ ಈ ಜನರನ್ನು’ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಸರಕಾರ ಮಾಡುತ್ತಿರುವ ತಪ್ಪುಗಳನ್ನು ಜನರ ಗಮನಕ್ಕೆ ತರಲೇಬೇಕು. ಅದಕ್ಕಾಗಿ ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಅಬಕಾರಿ ಇಲಾಖೆಯಲ್ಲಿ 4 ಸಾವಿರ ಕೋಟಿ ಲೂಟಿ ನಡೆದಿದೆ ಎಂದು ನಾವು ಆರೋಪಿಸಿದ್ದೆವು. ಆದರೆ ಅದು ತಪ್ಪು ಎಂದು ಈಗ ಗೊತ್ತಾಗಿದೆ. ಲೂಟಿ ಮೊತ್ತ 6 ಸಾವಿರ ಕೋಟಿ ಎಂದು ಅಬಕಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.
ಈ ವಿಚಾರವಾಗಿ ನಿನ್ನೆ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಹಾಗಾದರೆ ಆ 6 ಸಾವಿರ ಕೋಟಿ ರೂಪಾಯಿಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಎಷ್ಟು ಪಾಲು ಬಂದಿದೆ ಎಂದು ಅವರು ಪ್ರಶ್ನಿಸಿದರು. ಜೊತೆಗೆ ಈ ಹಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪಾಲೆಷ್ಟು ಎಂಬುದನ್ನೂ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.



