ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ರಾಜಕೀಯ ಪುಢಾರಿ ರಾಜೀವ್ ಗೌಡನನ್ನು ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಿದರು.
ಆರೋಪಿಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ, ತನಿಖೆ ಇನ್ನೂ ಮುಂದುವರಿಯಬೇಕಿದ್ದು ಆರೋಪಿಯ ಮೊಬೈಲ್ ಹಾಗೂ ಪರಾರಿಯಾಗಲು ಬಳಸಿದ ಕಾರನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ವಾದಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇದೇ ಪ್ರಕರಣದಲ್ಲಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರು ಉದ್ಯಮಿ ಮೈಕಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ನಡುವೆ ರಾಜೀವ್ ಗೌಡ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.



