ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೇ ಕಣ್ಮುಂದೆ ಹಾಯುವುದು ಅವರ ಪರಮಪವಿತ್ರವಾದ ಜೀವನ. ತಮ್ಮ ಆಧ್ಯಾತ್ಮಿಕ ಶಕ್ತಿ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಎಂದು ಕನ್ನಡ ಉಪನ್ಯಾಸಕಿ ರೇಶ್ಮಿ ಮೇಲಗಿರಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡ ಶ್ರೀಮಾತೆ ಶಾರದಾ ದೇವಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು. ಶ್ರೀಮಾತೆ ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿಯನ್ನು ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ, ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾಕಾರ್ಯಗಳಿಗೆ ಮೀಸಲಾಗಿರುತ್ತಿತ್ತು. ವಾಸ್ತವದಲ್ಲಿ ರಾಮಕೃಷ್ಣ ಪರಮಹಂಸರ ಸಾಧನೆ ಪರಿಪೂರ್ಣಗೊಂಡದ್ದು ಶಾರದಾ ದೇವಿಯವರ ಸಹಕಾರದಿಂದಲೇ ಎಂದು ರಾಮಕೃಷ್ಣರೇ ಹೇಳಿಕೊಂಡಿದ್ದರಂತೆ. ಸ್ವಾಮಿ ವಿವೇಕಾನಂದರು ಶಾರದೇವಿಯವರನ್ನು ಮಾತೃಸ್ವರೂಪ ಸ್ಥಾನದಲ್ಲಿ ಕಾಣುತ್ತಿದ್ದರೆಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕಿ ಸಾವಿತ್ರಿಬಾಯಿ ನೇಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಾರ್ವತಿ ಪಾಟೀಲ, ಅನ್ನಪೂರ್ಣ ಓದುನವರ, ಗಾಯತ್ರಿ ಓದುನವರ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಅರಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷೆ, ಸಾಹಿತಿ ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ್, ಲತಾ ತಟ್ಟಿ, ಶಾಂತಾ ಅಬ್ಬಿಗೇರಿ, ಕಾಂಚನಮಾಲಾ ಹಸರೆಡ್ಡಿ, ನೀಲಕ್ಕ ಬೂದಿಹಾಳ, ಲಲಿತಾ ಲಮಾಣಿ, ಅರುಂಧತಿ ಬಿಂಕದಕಟ್ಟಿ, ಜಯಶ್ರೀ ಮತ್ತಿಕಟ್ಟಿ, ವೀಣಾ ಕುಂಬಿ, ಅಶ್ವಿನಿ ಅಂಕಲಕೋಟಿ, ದೇವಕ್ಕ ಕೊಡ್ಲಿವಾಡ, ರತ್ನಾ ಕರ್ಕಿ, ಶಾರದಾ ಮಹಾಂತಶೆಟ್ಟರ ಮುಂತಾದವರಿದ್ದರು. ಶೈಲಾ ಬಿಂಕದಕಟ್ಟಿ, ಶೋಭಾ ಗಾಂಜಿ, ಮಹಾನಂದಾ ಕೊಣ್ಣೂರ ನಿರೂಪಿಸಿದರು.



