ಪುಣೆ:- ದೇಶಿಯ ಆಟೋಮೊಬೈಲ್ ಕ್ಷೇತ್ರವು ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಕುಮಾರಸ್ವಾಮಿ ಹೇಳಿದ್ದಾರೆ.
ಪುಣೆಯಲ್ಲಿ ಮಂಗಳವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ (SIAT)–2026ರ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುರಕ್ಷಿತ, ಸುಸ್ಥಿರ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಚಲನಶೀಲತಾ ಪರಿಹಾರಗಳತ್ತ ಭಾರತ ಸಾಧಿಸುತ್ತಿರುವ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಭಾರತೀಯ ಆಟೋಮೊಬೈಲ್ ಕ್ಷೇತ್ರದ ವೇಗದ ಬೆಳವಣಿಗೆಯನ್ನು ಉಲ್ಲೇಖಿಸಿದ ಸಚಿವರು, 2023–24ನೇ ಹಣಕಾಸು ವರ್ಷದಲ್ಲಿ 28.4 ಮಿಲಿಯನ್ ಯೂನಿಟ್‌ಗಳಾಗಿದ್ದ ವಾಹನ ಉತ್ಪಾದನೆ 2024–25ರಲ್ಲಿ 31 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಅದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯೂನಿಟ್‌ಗಳಿಂದ 5.36 ಮಿಲಿಯನ್ ಯೂನಿಟ್‌ಗಳಿಗೆ ಹೆಚ್ಚಾಗಿದೆ. ಈ ಅಂಕಿ-ಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ವಲಯವನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರದ ನೀತಿಗಳ ಯಶಸ್ಸನ್ನು ತೋರಿಸುತ್ತವೆ ಎಂದು ಹೇಳಿದರು.
ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡಿದ ಅವರು, 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದರು. 2030ರ ವೇಳೆಗೆ ದೇಶದ ಜಿಡಿಪಿ 7.3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪುವ ಸಾಮರ್ಥ್ಯ ಹೊಂದಿದ್ದು, ಉತ್ಪಾದನೆ ಮತ್ತು ಬೆಳವಣಿಗೆ ಸಮತೋಲಿತ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, 2070ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯತ್ತ ಭಾರತ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ದೃಷ್ಟಿಕೋನವು ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸಿ, ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನವನ್ನು ಮತ್ತಷ್ಟು ದೃಢಪಡಿಸುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.



