ನವದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಹೋಗಲಾಡಿಸುವ ಉದ್ದೇಶದಿಂದ ಯುಜಿಸಿ ಜಾರಿಗೆ ತಂದಿರುವ ಹೊಸ ನಿಯಮಗಳ ಬಗ್ಗೆ ಉಂಟಾದ ವಿವಾದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.
ಹೊಸ ನಿಯಮಗಳ ಜಾರಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಹಾಗೂ ಕಾನೂನು ದುರುಪಯೋಗಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ಗಳಲ್ಲಿ ರಕ್ಷಣೆ ಒದಗಿಸುವುದೇ ಈ ನಿಯಮಗಳ ಮುಖ್ಯ ಉದ್ದೇಶವಾಗಿದ್ದು, ಜಾತಿ ನಿಂದನೆ ಮತ್ತು ತಾರತಮ್ಯವನ್ನು ಸಂಪೂರ್ಣವಾಗಿ ತಡೆಯಲು ಯುಜಿಸಿ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.



