ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆ ವೇಳೆ ಅವಘಡ ಸಂಭವಿಸಿವೆ.
ರಥೋತ್ಸವದ ನಂತರ ಸಂಪ್ರದಾಯದಂತೆ ನಡೆಯುವ ಪಾನಕದ ಎತ್ತಿನಗಾಡಿಗಳ ಓಟದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನಸಂದಣಿಯೊಳಗೆ ನುಗ್ಗಿದವು. ಈ ವೇಳೆ ಒಂದು ಎತ್ತಿನಗಾಡಿ ರಥಕ್ಕೆ ಡಿಕ್ಕಿ ಹೊಡೆದಿದ್ದು, ಅಡ್ಡ ಬಂದ ವ್ಯಕ್ತಿಗೂ ಡಿಕ್ಕಿ ಸಂಭವಿಸಿದೆ. ಅಲ್ಲದೇ ವ್ಯಕ್ತಿಯೊಬ್ಬರು ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಜಾತ್ರೆ ವೇಳೆ ಉಂಟಾದ ಈ ಅವಘಡಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.



