ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗುವ ಸಾಧ್ಯತೆ ಕಂಡುಬಂದಿದೆ. ಆರ್ಸಿಬಿ ಮ್ಯಾನೇಜ್ಮೆಂಟ್‌ನಿಂದಲೇ ಸಣ್ಣ ಸುಳಿವು ಲಭಿಸಿದ್ದು, ಇಂದು ಅಥವಾ ನಾಳೆ ಒಳಗಾಗಿ ಬೆಂಗಳೂರಿನಲ್ಲಿ ಆರ್ಸಿಬಿ ತವರು ಪಂದ್ಯಗಳನ್ನು ಆಡುವ ಕುರಿತು ಅಧಿಕೃತ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ.
ಐಪಿಎಲ್ ಆರಂಭಕ್ಕೆ ಇನ್ನೂ ಎರಡು ತಿಂಗಳು ಮಾತ್ರ ಬಾಕಿ ಇದ್ದರೂ, ಆರ್ಸಿಬಿ ಈವರೆಗೂ ತನ್ನ ತವರು ಮೈದಾನವನ್ನು ಅಂತಿಮಗೊಳಿಸಿಲ್ಲ. ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಕುರಿತು ಯಾವುದೇ ಸ್ಪಷ್ಟ ಸೂಚನೆಯನ್ನು ಮ್ಯಾನೇಜ್ಮೆಂಟ್ ನೀಡಿರಲಿಲ್ಲ. ಈ ನಡುವೆ ಮತ್ತೆ ಬೆಂಗಳೂರಲ್ಲೇ ಆರ್ಸಿಬಿ ಪಂದ್ಯಗಳು ನಡೆಯಬೇಕು ಎಂಬ ಅಭಿಮಾನಿಗಳ ಒತ್ತಾಯ ಹೆಚ್ಚಾಗಿದೆ.
ಈ ಹಿನ್ನೆಲೆ, ಅಭಿಮಾನಿಗಳ ಆಶೆಯನ್ನು ಈಡೇರಿಸುವ ನಿಟ್ಟಿನಲ್ಲಿ ಆರ್ಸಿಬಿ ಆಡಳಿತ ಮಂಡಳಿ ಮುಂದಿನ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಕಳೆದ ವಾರ ಕೆಎಸ್ಸಿಎ, “ಬೆಂಗಳೂರಿನಲ್ಲಿ ಆಡುವ ಕುರಿತು ಅಂತಿಮ ನಿರ್ಧಾರ ಆರ್ಸಿಬಿ ಮ್ಯಾನೇಜ್ಮೆಂಟ್‌ದ್ದೇ” ಎಂದು ಹೇಳಿ ಹೊಣೆಗಾರಿಕೆಯನ್ನು ಆರ್ಸಿಬಿ ಮೇಲೆ ಹಾಕಿತ್ತು. ಆದರೆ ಆರ್ಸಿಬಿ ಇದುವರೆಗೂ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.
ಇದೀಗ ಬಿಸಿಸಿಐ ತವರು ಮೈದಾನ ಘೋಷಣೆಗೆ ನೀಡಿದ್ದ ಡೆಡ್ಲೈನ್ ಕೂಡ ಮುಗಿದಿದ್ದು, ಆರ್ಸಿಬಿಗೆ ನಿರ್ಧಾರ ಪ್ರಕಟಿಸುವ ಒತ್ತಡ ಹೆಚ್ಚಾಗಿದೆ. ಈ ಕಾರಣದಿಂದ ಬಿಸಿಸಿಐಗೆ ಡೆಡ್ಲೈನ್ ವಿಸ್ತರಣೆಗೆ ಮನವಿ ಸಲ್ಲಿಸಿರುವ ಆರ್ಸಿಬಿ, ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಸಂಬಂಧ ಸರ್ಕಾರದೊಂದಿಗೆ ನೇರವಾಗಿ ಚರ್ಚೆಗೆ ಮುಂದಾಗಿದೆ.
ಇಂದು ಅಥವಾ ನಾಳೆ ಸರ್ಕಾರದೊಂದಿಗೆ ಸಭೆ ನಡೆಸಿ, ಹಿಂದಿನ ದುರಂತ ಘಟನೆ ಬಳಿಕ ಉಂಟಾದ ಬೆಳವಣಿಗೆಗಳು ಮತ್ತು ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರ ಬಳಿಕ ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸುವ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಕೆಎಸ್ಸಿಎ ಮತ್ತು ಪೊಲೀಸ್ ಇಲಾಖೆ ನಡುವೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಖುನ್ನಾ ವರದಿ ಸಂಬಂಧ ಮತ್ತೊಂದು ಹಂತದ ಪರಿಶೀಲನೆ ನಡೆಸಿ, ನಂತರ ಮುಂದಿನ ಕ್ರಮಗಳ ಬಗ್ಗೆ ಪೊಲೀಸ್ ಆಯುಕ್ತರು ಸೂಚನೆ ನೀಡಲಿದ್ದಾರೆ.
ಒಟ್ಟಾರೆ, ಇಂದು ಅಥವಾ ನಾಳೆಯೊಳಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಕುರಿತು ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದ್ದು, 18 ವರ್ಷಗಳಿಂದ ಅಭಿಮಾನಿಗಳು ನೀಡಿರುವ ಪ್ರೀತಿಗೆ ಪೂರಕವಾಗಿ ಆರ್ಸಿಬಿ ಮತ್ತೆ ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಯುತ್ತದೆಯೇ? ಅಥವಾ ದುರಂತದ ನೋವಿನ ಹಿನ್ನೆಲೆಯಲ್ಲಿ ಬೇರೆ ತವರು ಮೈದಾನ ಆಯ್ಕೆ ಮಾಡುತ್ತದೆಯೇ ಎಂಬುದು ಕಾದು ನೋಡಬೇಕಿದೆ.



