ಬೆಂಗಳೂರು: ಅಮೃತಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 4 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಹಾಗೂ ಅಭಿನವ್ ಎಂದು ಗುರುತಿಸಲಾಗಿದೆ.
ಥೈಲ್ಯಾಂಡ್ನಿಂದ ವಿಮಾನದ ಮೂಲಕ ಡ್ರಗ್ ತರಿಸಿ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಕಾರ್ಯಾಚರಣೆಯಲ್ಲಿ 3 ಕೆಜಿ ಹೈಡ್ರೋ ಗಾಂಜಾ, 500 ಎಲ್ಎಸ್ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಡ್ರಗ್ ಸಾಗಣೆ ಹಾಗೂ ಮಾರಾಟಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.



