ಬೆಂಗಳೂರು: ಜಾತ್ರೆಗಳಲ್ಲಿ ಬೊಂಬೆ ಮಾರಾಟ, ಕೂದಲು ಮಾರಾಟ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಾಯತ್ರಿ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಜಾತ್ರೆಗಳಲ್ಲಿ ಬೊಂಬೆ ಮಾರಾಟ ಹಾಗೂ ಕೂದಲು ಖರೀದಿ ನೆಪದಲ್ಲಿ ಮಹಿಳೆಯರ ಗಮನ ಹರಿಸಿ, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳ ಕೈಯಿಂದ ಭಾರೀ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕೆಆರ್ ಪುರದ ದೇವಸಂದ್ರ ಪ್ರದೇಶದಲ್ಲಿ ಜಾತ್ರೆ ನಡೆಯುತ್ತಿದ್ದ ವೇಳೆ, ದಂಪತಿಯೊಬ್ಬರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಲಾಗಿದೆ. ಈ ವೇಳೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಕೆಆರ್ ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಹೆಂಡತಿ ಗಾಯತ್ರಿ ಜಾತ್ರೆಗಳಲ್ಲಿ ಕೂದಲು ಹಾಗೂ ಬೊಂಬೆ ವ್ಯಾಪಾರ ಮಾಡುತ್ತಿದ್ದರೆ,
ಗಂಡ ಶ್ರೀಕಾಂತ್ ಜಾತ್ರೆಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು. ಈ ಸಂಬಂಧ ಕೆಆರ್ ಪುರ ಪೊಲೀಸರು ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಂದ ಇನ್ನಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.



