ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸದ್ದು ಗದ್ದಲವಿಲ್ಲದ ಶಾಂತ ವಾತಾವರಣ ಸೃಷ್ಟಿಸಿ ಏಕಾಗ್ರಚಿತ್ತದಿಂದ ಅಭ್ಯಾಸದಲ್ಲಿ ತಲ್ಲೀನರಾಗಲು ಓದಿನ ಮನೆ ಕಾರ್ಯ ಯೋಜನೆ ಅತ್ಯಂತ ಉಪಯುಕ್ತವಾಗಿದೆ ಎಂದು ಗದಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶಿಗ್ಲಿಯ ಕೆ.ಜಿ. ಮುದಗಲ್ಲ ಪ್ರೌಢಶಾಲೆಯ ಜಿ.ಎಸ್.ಎಸ್ ಶಾಲಾ ಉತ್ಸವದ ವೇಳೆ ಓದಿನ ಮನೆ ಉದ್ಘಾಟಿಸಿ ಮಾತನಾಡಿದರು.
ಓದಿನ ಮನೆಯಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಉಂಟಾಗುತ್ತದೆ. ಓದುವ ವೇಳೆ ಮೂಡುವ ಪ್ರಶ್ನೆ, ಸಮಸ್ಯೆಗಳಿಗೆ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಾಗಿದೆ. ಟಿವಿ, ಮೊಬೈಲ್ ಇತರೆ ಚಟುವಟಿಕೆಗಳಿಂದ ದೂರವಿದ್ದು, ಓದುವ, ಬರೆಯುವ ಕೌಶಲ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ ಜತೆಗೆ ಪರೀಕ್ಷೆ ಎದುರಿಸುವಲ್ಲಿ ಆತ್ಮಸ್ಥೈರ್ಯ ಬೆಳೆಸುತ್ತದೆ. ಈ ಕಾರ್ಯ ಯೋಜನೆ ಯಶಸ್ವಿಯಾಗುವಲ್ಲಿ ಪಾಲಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅಗತ್ಯ ಎಂದರು.
ಈ ವೇಳೆ ಬಿಇಓ ಹೆಚ್. ನಾಣ್ಕಿ ನಾಯಕ, ಸಂಸ್ಥೆಯ ಚೇರಮನ್ ರಂಜನ್ ಪಾಟೀಲ, ಸಹ ಚೇರಮನ್ ರಾಜರತ್ನ ಹುಲಗೂರ, ಪ್ರವೀಣ ಹುಲಗೂರ, ಶಿವಾನಂದ ಮೂಲಿಮನಿ, ಯಲ್ಲಪ್ಪ ತಳವಾರ, ಮಂಜುನಾಥ ಶಂಭೋಜಿ, ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ, ಪ್ರಕಾಶ ಮ್ಯಾಗೇರಿ, ರಮೇಶ ನವಲೆ, ಸಿ.ವ್ಹಿ. ಹೂಗಾರ, ಪ್ರಕಾಶ ರಜಪೂತ, ಅಮರೇಶ್ವರ ಹುಲಗೂರ, ಫಕ್ಕೀರೇಶ ಕುರಿ, ವೀರಣ್ಣ ಅಳ್ಳಳ್ಳಿ, ಎಂ.ವಿ. ತಿಮ್ಮಾಪುರ ಮುಂತಾದವರಿದ್ದರು.



