ವಿಜಯಸಾಕ್ಷಿ ಸುದ್ದಿ, ಡಂಬಳ: ಕೂಲಿ ಕಾರ್ಮಿಕರ ಹಿತ ಕಾಯುವ ಮಹಾತ್ಮ ಗಾಂಧಿ ರೋಜ್ಗಾರ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಜಿ ರಾಮ್ ಜಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ (ಸಂಗನಗೌಡ) ಆರೋಪಿಸಿದರು.
ಡಂಬಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೈತರ, ಕೂಲಿಕಾರ್ಮಿಕರ, ಮಹಿಳೆಯರು ಮತ್ತು ಪುರುಷರಿಗೆ ಒಂದೇ ವೇತನ ಜಾರಿಗೆ ಮಾಡಿ ಆರ್ಥಿಕವಾಗಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಮಹಾತ್ಮ ಗಾಂಧಿ ರೋಜ್ಗಾರ ಯೋಜನೆಯ ಕಾಯ್ದೆ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ಇನ್ನಿತರೆ ಗ್ರಾಮೀಣ ದುಡಿಮೆಗಾರರಲ್ಲಿ ಬಹು ದೊಡ್ಡ ಆಶಾಕಿರಣವಾಗಿತ್ತು.
ಆದರೆ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಹೊಸದಾಗಿ ವಿಕಸಿತ ಭಾರತ ರೋಜ್ಗಾರ್ ಆಜೀವಿಕ ಮಿಷನ್ ಗ್ರಾಮೀಣ ಖಾತರಿ (ವಿ.ಬಿ.ಜಿ. ರಾಮ್ ಜಿ) ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಿಂದ ಕೂಲಿಕಾರ ಕಾರ್ಮಿಕರ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತವೆ. 125 ದಿನಗಳ ಕೆಲಸ ಸಿಗುವುದಿಲ್ಲ ಮತ್ತು ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40ರಷ್ಟು ಮೊತ್ತವನ್ನು ಖರ್ಚು ಮಾಡಬೇಕೆಂಬ ಅಂಶಗಳಿಂದ ಕಾರ್ಮಿಕರನ್ನು ಕೂಲಿಯಿಂದ ವಂಚಿತರಾಗಿ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.



