ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕೋಡಿಕೊಪ್ಪದ ಶ್ರೀ ಹಠಯೋಗಿ ವೀರಪ್ಪಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವು ಸಹಸ್ರಾರು ಭಕ್ತ ಸಾಗರದ ನಡುವೆ ಅತ್ಯಂತ ಸಡಗರ ಸಂಭ್ರಮದಿಂದ ಬುಧವಾರ ಜರುಗಿತು.
ಬೆಳಗ್ಗೆ 6 ಗಂಟೆಗೆ ಕೃತ್ತಿ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ, ಮಂಗಳರಾತಿ ಸೇರಿದಂತೆ ವಿಶೇಷ ಅಭಿಷೇಕ ಜರುಗಿದವು. ಸಂಜೆ 6 ಗಂಟೆಗೆ ನಡೆದ ರಥೋತ್ಸವದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಬೆಂಗಳೂರು, ಚಾಮರಾಜನಗರ, ಉಡುಪಿ, ಗದಗ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟಿ, ಬಳ್ಳಾರಿ, ಹೊಸಪೇಟಿ, ಕೊಪ್ಪಳ, ಯಲಬುರ್ಗಾ, ಕುಕನೂರು, ಕರಮುಡಿ, ಹಾಲಕೆರೆ, ನಿಡಗುಂದಿ, ಗಜೇಂದ್ರಗಡ, ರಾಯಚೂರ, ಯಾದಗೇರಿ, ನರೇಗಲ್ಲ, ಅಬ್ಬಿಗೇರಿ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಕುರುಡಗಿ, ಯರೇಬೇಲೇರಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ತೋಡಿಹಾಳ, ಬಂಡಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಟ್ರ‍್ಯಾಕ್ಟರ್ ಹಾಗೂ ಚಕ್ಕಡಿ, ದ್ವಿಚಕ್ರ ವಾಹನ, ಕಾರ್ ಸೇರಿದಂತೆ ಇತರೆ ವಾಹನಗಳಲ್ಲಿ ಆಗಮಿಸಿದ್ದರು.
ತೇರಿನ ಹಗ್ಗವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ದೇಕೊಪ್ಪದಿಂದ ಭಜನೆ, ಡೊಳ್ಳು, ಕಹಳೆಗಳ ಹಾಗೂ ವಿವಿಧ ವಾದ್ಯಗಳೊಂದಿಗೆ ಆಗಮಿಸಿತು. ರಥದ ಕಳಸವು ಸಂಕನಗೌಡ್ರ ಮನೆಯಿಂದ ಮೆರವಣಿಗೆ ಮೂಲಕ ವೀರಪ್ಪಜ್ಜನ ಮಠವನ್ನು ತಲುಪಿತು. ತೇರು ಬೇವಿನ ಗಿಡದ ಪಾದಗಟ್ಟಿವರೆಗೆ ತಲುಪಿ ಮರಳಿ ಮೂಲಸ್ಥಳಕ್ಕೆ ತಲುಪಿತು. ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30 ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು.



