ಸ್ಟಾರ್ ಆಗಿರಲಿ ಅಥವಾ ಸಾಮಾನ್ಯ ಪ್ರಯಾಣಿಕನಾಗಿರಲಿ — ನಿಯಮ ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಮುಂಬೈ ಮೆಟ್ರೋ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ನಟ ವರುಣ್ ಧವನ್ ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ಗಳಿಗೆ ನೇತಾಡಿ ಸ್ಟಂಟ್ ಮಾಡಿದ ವೀಡಿಯೊ ವೈರಲ್ ಆದ ಬಳಿಕ, ಅಧಿಕಾರಿಗಳು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಮೆಟ್ರೋದಲ್ಲಿನ ಹ್ಯಾಂಡಲ್‌ಗಳಲ್ಲಿ ನೇತಾಡುವ ಮೂಲಕ ವರುಣ್ ಧವನ್ ಪುಲ್-ಅಪ್ ಮಾಡಲು ಪ್ರಯತ್ನಿಸಿದರು. ಆ ವಿಡಿಯೋ ವೈರಲ್ ಆಗಿ ಅವರು ವಿವಾದಕ್ಕೆ ಸಿಲುಕಿದರು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡವನ್ನೂ ವಿಧಿಸಲಾಯಿತು.
ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ತನ್ನ ಅಧಿಕೃತ ಖಾತೆಯಲ್ಲಿ ವರುಣ್ ಧವನ್‌ಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿ, “ಮೆಟ್ರೋದಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುವುದು ಖುಷಿ ನೀಡಬಹುದು. ಆದರೆ ಸುರಕ್ಷತಾ ಉಪಕರಣಗಳನ್ನು ಸ್ಟಂಟ್‌ಗೆ ಬಳಸುವುದು ಅಪಾಯಕಾರಿ. ಇದು ಇತರ ಪ್ರಯಾಣಿಕರಿಗೂ ತೊಂದರೆ ಉಂಟುಮಾಡುತ್ತದೆ” ಎಂದು ಹೇಳಿದೆ.
ಈ ಘಟನೆಗೆ ಸಂಬಂಧಿಸಿ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ವರುಣ್ ಧವನ್‌ಗೆ ₹500 ದಂಡ ವಿಧಿಸಿದ್ದು, ನಿಯಮ ಉಲ್ಲಂಘನೆ ಯಾರೇ ಮಾಡಿದರೂ ಕ್ರಮ ತಪ್ಪದು ಎಂಬ ಸಂದೇಶವನ್ನು ನೀಡಿದೆ.
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ವರುಣ್ ಧವನ್ ಅವರನ್ನು ಟ್ರೋಲ್ ಮಾಡುತ್ತಲೇ, ಕೆಲವರು “ಸೆಲೆಬ್ರಿಟಿಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



