ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಸ್ಪರ್ಧಿಯಾಗಿದ್ದ ಮಲ್ಲಮ್ಮಗೆ ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಮ್ಮ, ‘ವಿನಾಶಕಾಲೆ’ ಎಂಬ ಸಿನಿಮಾದಲ್ಲಿ ತಾಯಿ ಪಾತ್ರಕ್ಕೆ ಒಪ್ಪಿಕೊಂಡಿದ್ದೇನೆ. ನಟನೆಯನ್ನು ಕಲಿತುಕೊಂಡು ಉತ್ತಮವಾಗಿ ಅಭಿನಯಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ನಟಿಸುವ ಅವಕಾಶ ದೊರೆತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಮಲ್ಲಮ್ಮ ಹೇಳಿದ್ದಾರೆ. “ಚಿಕ್ಕ ಮಕ್ಕಳು ಹಿಡಿದು ದೊಡ್ಡವರವರೆಗೆ ಎಲ್ಲರೂ ಗುರುತಿಸುತ್ತಿದ್ದಾರೆ. ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದು ನನಗೆ ಬಹಳ ಸಂತೋಷ ಕೊಡುತ್ತದೆ” ಎಂದು ಹೇಳಿದರು.
ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮರನ್ನು ‘ತಾಯಿ’ ಎಂದು ಕರೆಯುತ್ತಿದ್ದ ಸ್ಪರ್ಧಿ ಧ್ರುವಂತ್ ಕುರಿತು ಕೂಡ ಅವರು ಪ್ರತಿಕ್ರಿಯಿಸಿದ್ದಾರೆ. “ಬಿಗ್ ಬಾಸ್ ಮುಗಿದು ಇಷ್ಟು ದಿನವಾದರೂ ಧ್ರುವಂತ್ ನನ್ನನ್ನು ಸಂಪರ್ಕಿಸಿಲ್ಲ. ನಂಬರ್ ಕೂಡ ಕೊಟ್ಟಿಲ್ಲ. ಇದರಿಂದ ಸ್ವಲ್ಪ ಬೇಸರವಾಗಿದೆ” ಎಂದು ಮಲ್ಲಮ್ಮ ಹೇಳಿದ್ದಾರೆ.
ಚಿತ್ರವನ್ನು ನಿರ್ದೇಶಕ ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಭಾಗಿಯಾಗಿದ್ದಾರೆ. ನೈಜ ಘಟನೆಯಾಧಾರಿತ ಕಥೆಯನ್ನು ‘ವಿನಾಶ ಕಾಲೆ’ ಸಿನಿಮಾ ತೆರೆ ಮೇಲೆ ತರುತ್ತಿದೆ ಎಂಬುದು ವಿಶೇಷ.



