ಬೆಂಗಳೂರು: ಕುಡಿದು ವಾಹನ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ ಆರೋಪದಲ್ಲಿ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಘಟನೆ ನಡೆದಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂದರ ಹಿಂದೆ ಒಂದಾಗಿ ಹಲವು ವಾಹನಗಳು ಅಪಘಾತಕ್ಕೀಡಾಗಿವೆ. ಫಾರ್ಚುನರ್ ಕಾರನ್ನು ಮಯೂರ್ ಪಟೇಲ್ ತಾವೇ ಚಾಲನೆ ಮಾಡುತ್ತಿದ್ದು, ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ ಒಟ್ಟು ನಾಲ್ಕು ಕಾರುಗಳು ಜಖಂಗೊಂಡಿದ್ದು, ಅದರಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ವಾಹನ ಕೂಡ ಸೇರಿವೆ. ಡ್ರಂಕ್ & ಡ್ರೈವ್ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹಲಸೂರು ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಯೂರ್ ಪಟೇಲ್ ಅವರನ್ನು ಕರೆತಂದು ಮದ್ಯಪಾನ ಪರೀಕ್ಷೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಹಾನಿಗೊಳಗಾದ ಕಾರುಗಳ ಚಾಲಕರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನಟ ಮಯೂರ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



