ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವನೊಬ್ಬ ತನ್ನ ಗರ್ಭಿಣಿ ಸೊಸೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ರೇಖಾ (25) ಎಂದು ಗುರುತಿಸಲಾಗಿದ್ದು, ಆಕೆ ಗರ್ಭಿಣಿಯಾಗಿದ್ದಳು. ಕೌಟುಂಬಿಕ ವಿಚಾರಗಳಿಂದಾಗಿ ರೇಖಾ ತವರು ಮನೆಗೆ ಹೋಗಿದ್ದಳು. ಈ ವಿಚಾರ ತಿಳಿದ ಮಾವ ಸಿದ್ದಪ್ಪ (50) ಚಿಕ್ಕಹಣಗಿ ಗ್ರಾಮದಲ್ಲಿರುವ ಆಕೆಯ ತವರು ಮನೆಗೆ ತೆರಳಿದ್ದಾನೆ ಎನ್ನಲಾಗಿದೆ. ಘಟನೆ ದಿನ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಸಿದ್ದಪ್ಪ, ಟಿವಿ ನೋಡುತ್ತಾ ಮಲಗಿದ್ದ ರೇಖಾಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕತ್ತನ್ನು ಸೀಳಿ ಹತ್ಯೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಒದ್ದಾಡಿದರೂ, ಹೆಚ್ಚಿನ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕೃತ್ಯ ಎಸಗಿದ ನಂತರ ಆರೋಪಿ ಸಿದ್ದಪ್ಪ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಆರೋಪಿ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗರ್ಭಿಣಿ ಮಹಿಳೆಯ ಅಮಾನವೀಯ ಹತ್ಯೆ ಗ್ರಾಮಸ್ಥರಲ್ಲಿ ಭೀತಿ ಮತ್ತು ಆಕ್ರೋಶವನ್ನುಂಟು ಮಾಡಿದೆ.



