ಮೈಸೂರು: ನಂಜನಗೂಡಿನ ಶಂಕರಪುರ ಬಡಾವಣೆಯಲ್ಲಿರುವ ಗುಜರಿಯಲ್ಲಿ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಪದಾರ್ಥಗಳು ಸಂಪೂರ್ಣವಾಗಿ ಸುಟ್ಟು ನಾಶವಾದ ಘಟನೆ ನಡೆದಿದೆ.
ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಪ್ರಾರಂಭವಾದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಗುಜರಿಯನ್ನು ವ್ಯಾಪಿಸಿ ಒಳಗಿದ್ದ ವಸ್ತುಗಳನ್ನು ಭಸ್ಮಗೊಳಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶ್ರಮಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೂ ಬೆಂಕಿಯ ತೀವ್ರತೆಗೆ ಗುಜರಿಯಲ್ಲಿದ್ದ ಹೆಚ್ಚಿನ ಪದಾರ್ಥಗಳು ಸಂಪೂರ್ಣವಾಗಿ ನಾಶವಾಗಿವೆ.
ಈ ಗುಜರಿ ನಾಸಿರ್ ಎಂಬವರಿಗೆ ಸೇರಿದ್ದು, ಗುಜರಿಯ ಸಮೀಪದಲ್ಲೇ ವಾಸದ ಮನೆಗಳಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಇತರೆ ಅನಾಹುತಗಳು ಸಂಭವಿಸಿಲ್ಲ. ಘಟನೆಯ ಬಳಿಕ ಸ್ಥಳೀಯರು ಇಂತಹ ಗುಜರಿ ಘಟಕಗಳಿಗೆ ಅನುಮತಿ ನೀಡುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.



