ಬೆಂಗಳೂರು ಗ್ರಾಮಾಂತರ: ಸಿಗರೇಟ್ ಸೇದಲು ಬೆಂಕಿಪಟ್ಟಣ ನೀಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.
ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದ ಸುಶಾಂತ್ ಎಂಬ ಯುವಕನ ಬಳಿ ಆರೋಪಿಗಳು ಬೆಂಕಿಪಟ್ಟಣ ಕೇಳಿದ್ದಾರೆ. ಸುಶಾಂತ್ “ಇಲ್ಲ” ಎಂದು ಹೇಳಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ, ತಂದುಕೊಡು ಎಂದು ಕೂಗುತ್ತಾ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಸುಶಾಂತ್‌ನನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿ, ಎರಡನೇ ಮಹಡಿಯ ಮೇಲಿಂದ ಕೆಳಕ್ಕೆ ತಳ್ಳಿದ್ದು, ಪರಿಣಾಮವಾಗಿ ಸುಶಾಂತ್ ಮೃತಪಟ್ಟಿದ್ದಾನೆ. ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಉಜ್ಬಲ್ ಪ್ರಸಾದ್, ಪ್ರಿನ್ಸ್ ಹಾಗೂ ಸೂರಜ್ ರಾಮ್ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.



