ಮುಂಬೈ: ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ‘ದಾದಾ’ಗೆ ಬೆಳಗ್ಗೆ 11 ಗಂಟೆಗೆ ಅಂತಿಮ ವಿದಾಯ ಹೇಳಲಾಗುತ್ತದೆ.
ಅಂತ್ಯಕ್ರಿಯೆ ಅಜಿತ್ ಪವಾರ್ ಅವರ ರಾಜಕೀಯ ಭದ್ರಕೋಟೆಯಾದ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ನೆರವೇರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ವಿದ್ಯಾ ಪ್ರತಿಷ್ಠಾನ ಕ್ಯಾಂಪಸ್ (ಗಡಿಮಾ) ನಿಂದ ಅಂತಿಮ ಯಾತ್ರೆ ಆರಂಭಗೊಂಡಿದ್ದು, ನಗರವಿಡೀ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಅವಕಾಶ ನೀಡುತ್ತಾ ಸಾಗುತ್ತಿದೆ.
ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಲಕ್ಷಾಂತರ ಬೆಂಬಲಿಗರು ಸೇರಿರುವ ದೃಶ್ಯ ಭಾವನಾತ್ಮಕ ವಾತಾವರಣ ನಿರ್ಮಿಸಿದೆ.
ಉಪಮುಖ್ಯಮಂತ್ರಿ ಅಹಲ್ಯಾಬಾಯಿ ಹೋಳ್ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೊರಗಡೆ ಅಜಿತ್ ಪವಾರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದುಬರುತ್ತಿದೆ.
ಈ ದುರಂತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ದಿಲೀಪ್ ಜಾಧವ್ ಅವರ ಅಂತ್ಯಕ್ರಿಯೆ ನಿನ್ನೆ ಸತಾರಾದಲ್ಲಿ ನೆರವೇರಿಸಲಾಯಿತು. ಅವರ ಪುಟ್ಟ ಮಗನೇ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದು, ಈ ದೃಶ್ಯ ಹಲವರ ಕಣ್ಣೀರನ್ನು ತರಿಸಿದೆ.
ಪತನಗೊಂಡ ಚಾರ್ಟರ್ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಡಿಸಿಎಂ ಅಜಿತ್ ಪವಾರ್, ಪಿಎಸ್‌ಒ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್, ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ದುರಂತದಲ್ಲಿ ಮೃತಪಟ್ಟಿದ್ದಾರೆ.



