ಬೆಂಗಳೂರು ಮತ್ತೆ ಸಿನಿಮಾ ಸಂಸ್ಕೃತಿಯ ಜಾಗತಿಕ ವೇದಿಕೆಯಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಇಂದು ವಿಧಾನಸೌಧದ ಭವ್ಯ ವೇದಿಕೆಯಲ್ಲಿ ಚಾಲನೆ ಸಿಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ಉದ್ಘಾಟನೆ ಮಾಡಲಿದ್ದು, ಚಿತ್ರರಸಿಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವ ಈ ಕಾರ್ಯಕ್ರಮಕ್ಕೆ, ಚಿತ್ರೋತ್ಸವದ ರಾಯಭಾರಿ ನಟ ಪ್ರಕಾಶ್ ರಾಜ್ ಹಾಗೂ ನಟಿ ರುಕ್ಮಿಣಿ ವಸಂತ್ ವಿಶೇಷ ಮೆರುಗು ನೀಡಲಿದ್ದಾರೆ.
ಸಂಜೆ 5.30ಕ್ಕೆ ನಡೆಯುವ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮವು ವಿಭಿನ್ನ ಸಂಸ್ಕೃತಿಗಳ ಸಂಗೀತ ಸಂವಾದವನ್ನು ಉಂಟುಮಾಡಲಿದೆ. ರಾತ್ರಿ ಉದ್ಘಾಟನಾ ಚಿತ್ರವಾಗಿ ನೆದರ್‌ಲ್ಯಾಂಡ್‌ನ ‘ಪೋರ್ಟ್ ಬ್ಯಾಗೇಜ್’ ಪ್ರದರ್ಶನಗೊಳ್ಳಲಿದೆ.
ಈ ಬಾರಿ BIFFES ನ ವೈಶಿಷ್ಟ್ಯವೆಂದರೆ, 65 ದೇಶಗಳ 225 ಚಿತ್ರಗಳ ಪ್ರದರ್ಶನ. ಪ್ರೇಕ್ಷಕರು ಒಂದೇ ನಗರದಲ್ಲಿ ಕುಳಿತು ವಿಶ್ವದ ಸಂಸ್ಕೃತಿ, ಜೀವನ ಶೈಲಿ ಮತ್ತು ಸಾಮಾಜಿಕ ವಾಸ್ತವತೆಯನ್ನು ಅನುಭವಿಸಬಹುದು. ಅದಕ್ಕಾಗಿಯೇ ಥೀಮ್ ಆಗಿ ‘ಬೆಂಗಳೂರಿನಲ್ಲಿ ಜಗತ್ತು’ ಆಯ್ಕೆ ಮಾಡಲಾಗಿದೆ.
ಇನ್ನೂ, ಈ ವರ್ಷದ ಧ್ಯೇಯವಾಕ್ಯ ವ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’
ಚಿತ್ರೋತ್ಸವಕ್ಕೆ ಸಾಮಾಜಿಕ ಆಳವನ್ನು ನೀಡಿದೆ. ಮಹಿಳಾ ದೃಷ್ಟಿಕೋನ, ಸಮಾನತೆ, ಮಾನವೀಯತೆ ಕುರಿತ ಚಿತ್ರಗಳಿಗೆ ಈ ಬಾರಿ ವಿಶೇಷ ಒತ್ತು ನೀಡಲಾಗಿದೆ.
ಡಾ. ರಾಜಕುಮಾರ್ ಅವರ ಚಲನಚಿತ್ರಗಳು, ಸ್ಮಿತಾ ಪಾಟೀಲ್ ಅವರ ಆಯ್ದ ಚಿತ್ರಗಳು, ಪೋಲೆಂಡ್ ಮತ್ತು ಥಾಯ್ಲೆಂಡ್ ದೇಶದ ಖ್ಯಾತ ನಿರ್ದೇಶಕರ ಚಿತ್ರಗಳು, ಸಮಕಾಲೀನ ಭಾರತೀಯ ಸಿನಿಮಾಗಳು – ಎಲ್ಲವೂ ಈ ಚಿತ್ರೋತ್ಸವವನ್ನು ನಿಜಾರ್ಥದಲ್ಲಿ ಒಂದು ಸಿನಿಮಾ ಮಹೋತ್ಸವವಾಗಿಸಿದೆ.
ಜನವರಿ 29ರಿಂದ ಫೆಬ್ರವರಿ 6ರವರೆಗೆ, ಲುಲು ಮಾಲ್ ಸಿನಿಪೊಲಿಸ್, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ – ಈ ಮೂರು ಕೇಂದ್ರಗಳಲ್ಲಿ ಪ್ರೇಕ್ಷಕರು ಜಾಗತಿಕ ಸಿನಿಮಾ ಸಂಭ್ರಮವನ್ನು ಅನುಭವಿಸಬಹುದು.



