ಗದಗ: ಸಮೀಪದ ಬೆಟಗೇರಿ ರೈಲ್ವೆ ಬ್ರಿಡ್ಜ್ ಬಳಿ ಓವರ್‌ಲೋಡ್ ಲಾರಿ ಸಿಲುಕಿಕೊಂಡ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ಪಿವಿಸಿ ಪೈಪ್‌ಗಳನ್ನು ಹೊತ್ತು ಗದಗನತ್ತ ಸಾಗುತ್ತಿದ್ದ ಲಾರಿ, ಕಡಿಮೆ ಎತ್ತರದ ರೈಲ್ವೆ ಬ್ರಿಡ್ಜ್ ಅಡಿಯಲ್ಲಿ ಅಡಕವಾಗಿದೆ. ಬ್ರಿಡ್ಜ್ ಎತ್ತರ ಕಡಿಮೆ ಇರುವುದರಿಂದ ಲಾರಿ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯ ರಸ್ತೆಯಲ್ಲೇ ನಿಂತುಕೊಂಡಿದೆ.
ಈ ಪರಿಣಾಮವಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಎರಡು ದಿಕ್ಕುಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಎರಡೂ ಬದಿಗಳಲ್ಲೂ ವಾಹನಗಳ ದೀರ್ಘ ಸಾಲುಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸಿದರು.
ಘಟನೆಯ ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಲಾರಿಯನ್ನು ತೆರವುಗೊಳಿಸುವವರೆಗೆ ಕೆಲಕಾಲ ಟ್ರಾಫಿಕ್ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.
ಈ ರೀತಿ ಘಟನೆ ತಿಂಗಳಲ್ಲಿ ಒಂದಾದರೂ ನಡೆಯುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.



