ಹಾಸನ, ಜ.29: ಹಾಸನದಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಅಡುಗೆ ಗುತ್ತಿಗೆದಾರ ಆನಂದ್ (48) ಅವರನ್ನು ಧರ್ಮೇಂದ್ರ ಎಂಬ ವ್ಯಕ್ತಿ ಐದಾರು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಜ.28ರ ತಡರಾತ್ರಿ ನಡೆದ ಈ ಘಟನೆ ಹಾಸನ ನಗರವನ್ನು ಬೆಚ್ಚಿಬೀಳಿಸಿದೆ. ಆನಂದ್ ಮತ್ತು ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಘಟನೆ ನಡೆದ ದಿನ ಇಬ್ಬರೂ ಬಾರ್ನಲ್ಲಿ ಭೇಟಿಯಾಗಿ ಮಹಿಳೆಯ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ. ನಂತರ ಆನಂದ್ ಮನೆಗೆ ತೆರಳಿದ್ದರೂ, ಧರ್ಮೇಂದ್ರ ಮತ್ತೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಆನಂದ್ ಬಂದ ಕೂಡಲೇ ಇಬ್ಬರ ನಡುವೆ ಮತ್ತೆ ಗಲಾಟೆ ಉಂಟಾಗಿದ್ದು, ಕುಡಿದ ಅಮಲಿನಲ್ಲಿ ಧರ್ಮೇಂದ್ರ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಆನಂದ್ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಅವರ ನಡುವೆ ವೈಷಮ್ಯ ತೀವ್ರಗೊಂಡಿತ್ತು. ಕೊನೆಗೆ ಆ ವೈಷಮ್ಯ ಕೊಲೆಯಲ್ಲಿ ಅಂತ್ಯಗೊಂಡಿದೆ.
ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹಾಸನ ನಗರ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



