ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ (Menstrual Leave) ನೀಡುವ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಋತುಚಕ್ರ ರಜೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದು, ರಜೆ ಪಡೆಯಲು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಲಾಗಿದೆ.
ಈ ಆದೇಶದಂತೆ, ಶಿಕ್ಷಣ ಇಲಾಖೆಯ ಮಹಿಳಾ ಸರ್ಕಾರಿ ನೌಕರರು ಪ್ರತೀ ತಿಂಗಳು ಒಂದು ದಿನದ ಋತುಚಕ್ರ ರಜೆಯನ್ನು ಪಡೆಯಬಹುದಾಗಿದೆ. ಈ ರಜೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದೇಶದಲ್ಲಿ 18 ರಿಂದ 52 ವರ್ಷ ವಯೋಮಿತಿಯೊಳಗಿನ ಋತುಚಕ್ರ ಹೊಂದಿರುವ ಮಹಿಳಾ ನೌಕರರು ಮಾತ್ರ ಈ ರಜೆಗೆ ಅರ್ಹರು ಎಂದು ತಿಳಿಸಲಾಗಿದೆ. ಅಲ್ಲದೆ, ಈ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಲು ಅವಕಾಶವಿರುವುದಿಲ್ಲ ಎಂದು ಸೂಚಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಆರೋಗ್ಯ ಮತ್ತು ಕೆಲಸದ ಒತ್ತಡವನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.



