ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಮಾಡಿರುವ ಆರೋಪಗಳಿಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಬೈರತಿ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಾಕ್ಷ್ಯಾಧಾರವಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವಂತೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಖಂಡಿಸಿದರು. ಈ ಕುರಿತು ನಗರದಲ್ಲಿ ಮಾತನಾಡಿದ ಸಚಿವರು, ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಪಾರದರ್ಶಕ ಕಾಯ್ದೆಯಡಿ ಸಂಪೂರ್ಣವಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ಮಂತ್ರಿಗಳು ಭಾಗಿಯಾಗುವುದಿಲ್ಲ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡವೇ ಅಂತಿಮಗೊಳಿಸುತ್ತದೆ ಎಂದು ಹೇಳಿದರು. ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೂ ಪದೇಪದೇ ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಬೈರತಿ ಸುರೇಶ್ ಕಿಡಿಕಾರಿದರು.
ದಿನಂಪ್ರತಿ ಈ ರೀತಿಯ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳ ಕಾರ್ಯನಿರ್ವಹಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಸಾರ್ವಜನಿಕವಾಗಿ ಒದಗಿಸಲಿ ಎಂದು ಸವಾಲು ಹಾಕಿದ ಸಚಿವರು, ವಿನಾಕಾರಣ ಆರೋಪಗಳ ಮೂಲಕ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಇನ್ನೂ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ಮಾಡುವ ಕುರಿತು ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು ಎಂದು ಸಚಿವರು ನೆನಪಿಸಿದರು. ಹಣಕಾಸು ಇಲಾಖೆಯ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ ಸುಮಾರು 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.



