ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೊಸ ಬಸ್ ನಿಲ್ದಾಣ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗದಗ ಜಿಲ್ಲೆಯ ಪರಿಸರದಲ್ಲಿಯೇ ಬಹುದೊಡ್ಡ ಹಾಗೂ 100 ಹಾಸಿಗೆಯ ‘ಶ್ರೀ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ನೂತನ ಕಟ್ಟಡದ ಉದ್ಘಾಟನೆ ಫೆ. 1ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ ಎಂದು ಡಾ. ಪ್ರಶಾಂತ ಧನ್ನೂರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಗುಂಟೆ ಜಾಗೆಯಲ್ಲಿ 45 ಸಾವಿರ ಚ.ಅಡಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಒಪಿಡಿ ಜತೆಗೆ ಹೈಟೆಕ್ ಹೆರಿಗೆ ಕೊಠಡಿ, ಹೈಟೆಕ್ ಮಾಡ್ಯೂಲರ್ ಆಪರೇಷನ್ ಥೇಟರ್, ಐಸಿಯು, ಎನ್‌ಐಸಿಯು, 247 ತುರ್ತು ಚಿಕಿತ್ಸೆ ಕೊಠಡಿ, ಐಯುಐ ಪ್ರಯೋಗಾಲಯ, ಅಲ್ಟ್ರಾ ಸನೋಗ್ರಫಿ, 247 ಅಂಬ್ಯುಲೆನ್ಸ್ ಸೇವೆ, ಕಿಡ್ನಿ ಸ್ಟೋನ್, ಪೈಲ್ಸ್, ಪಿಸ್ಟೂಲಾ ಹಾಗೂ ವೆರಿಕೋಸ್ ವೇದನೆಗೆ ಲೇಸರ್ ಚಿಕಿತ್ಸೆ, ಲ್ಯಾಪ್ರೋಸ್ಕೋಪಿ, ಹಿಸ್ಟ್ರೋಸ್ಕೋಪಿ, ಎಂಡೋಸ್ಕೋಪಿ, ಡಯಾಲಿಸಿಸ್, ಫೋಟೊಥೆರಪಿ, 2ಡಿ ಇಕೋ, ಯುರೋಪ್ಲೊಮೇಟ್ರಿಯಂತಹ ಸೌಲಭ್ಯಗಳು ಇಲ್ಲಿ ಸಿಗಲಿವೆ ಎಂದು ವಿವರಿಸಿದರು.
ವಿವಿಧ 19ಕ್ಕೂ ಅಧಿಕ ಪರಿಣಿತ ಹಾಗೂ ವಿಶೇಷಜ್ಞರಾಗಿರುವ ವೈದ್ಯರ ಸೇವೆ ಇಲ್ಲಿ ಕಾಲಕಾಲಕ್ಕೆ ಸಿಗಲಿದೆ. ಅಲ್ಲದೇ, ಜಿಲ್ಲೆಯ ಜನತೆ ಅಗತ್ಯವಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆಯಿತ್ತು. ಆದರೆ, ಪ್ರಸ್ತುತ ಈ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ ಸೌಲಭ್ಯದ ಮೂಲಕ ಆ ಕೊರತೆಯನ್ನು ನೀಗಿಸಿ, ಇಲ್ಲಿಯೇ ಚಿಕಿತ್ಸೆ, ವೈದ್ಯಕೀಯ ಸೇವೆ ಸಿಗಲಿದೆ ಎಂದು ಹೇಳಿದರು.
ಡಂಬಳ-ಗದಗ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಕೂಲಡಸಂಗಮ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಾಲಕೆರೆ-ಹೊಸಪೇಡೆ-ಬಳ್ಳಾರಿ ಅನ್ನದಾನೇಶ್ವರ ಸಂಸ್ಥಾನಮಠದ ಜ. ಮುಪ್ಪಿನಬಸವಲಿಂಗ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಜ. ವಚನಾನಂದ ಸ್ವಾಮೀಜಿ, ನರೇಗಲ್ಲ ಹಿರೇಮಠ-ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗವಿಮಠ ಸಂಸ್ಥಾನದ ಜ. ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಡೋಣಿ-ಗದಗ ಕಪ್ಪತ್ತಗುಡ್ಡ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠ-ತುಮಕೂರು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯರು, ಗದಗನ ಸದ್ಗುರು ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು.
ಬಾಗಲಕೋಟ ಕ್ಷೇತ್ರದ ಮಾಜಿ ಸಂಸದರಾದ ಆರ್.ಎಸ್. ಪಾಟೀಲರ ಅಧ್ಯಕ್ಷತೆಯಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನೂತನ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಕೆ.ಬಿ. ಧನ್ನೂರ, ಡಾ. ಅನ್ನಪೂರ್ಣ ಪಿ. ಧನ್ನೂರ, ಪತ್ರಕರ್ತ ಅರುಣ ಕುಲಕರ್ಣಿ ಉಪಸ್ಥಿತರಿದ್ದರು.
ಬಾಕ್ಸ್
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ, ಎಸ್.ಜಿ. ನಂಜಯ್ಯನಮಠ, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಇತರರು ಆಗಮಿಸಲಿದ್ದಾರೆ ಎಂದು ಡಾ. ಪ್ರಶಾಂತ ಧನ್ನೂರ ವಿವರಿಸಿದರು.



