ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ 240ಕ್ಕೂ ಹೆಚ್ಚು ಅರೆ ಕಾನೂನು ಸ್ವಯಂ ಸೇವಕರು ನೇಮಕಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಮುಖ್ಯವಾಗಿದೆ. ಸಮಾಜಕ್ಕಾಗಿ ದುಡಿಯಲು, ಮನೆ-ಮನೆಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಲು ಸ್ವಯಂ ಸೇವಕರು ಸಿದ್ಧರಿದ್ದಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಸಹ ಈ ಮೂಲಕ ಮರಳಿ ಶಾಲೆಗೆ ಸೇರಿಸಬಹುದು. ಗದಗ ಜಿಲ್ಲೆಯನ್ನು ಸಮಸ್ಯೆ ಮುಕ್ತ ಮಾಡಲು ಶ್ರಮಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಾಗವೇಣಿ ಹೇಳಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಎ.ಡಿ.ಆರ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ವಕೀಲರ ಸಂಘ ಹಾಗೂ ಡೀಡ್ಸ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರೆ ಕಾನೂನು ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಮ್.ಎ. ಸಂಕನಾಳ ಮಾತನಾಡಿ, ಕಾನೂನು ತಿಳುವಳಿಕೆ ಪ್ರತಿಯೊಬ್ಬ ನಾಗರಿಕನ ಮುಖ್ಯ ಉದ್ದೇಶವಾಗಿದೆ. ಆತ್ಮರಕ್ಷಣೆಗಾಗಿ ಕಾನೂನಿನ ಅವಶ್ಯಕತೆ ಇದೆ. ಕಾನೂನು ಕಾರ್ಯಾಗಾರಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಹಾಯವಾಗುತ್ತದೆ ಎಂದರು.
ಮಹಿಳಾ ಸ್ವಯಂ ಸೇವಕರಾದ ರೂಪಾ ಹಾಗೂ ನಿರ್ಮಲಾ ಪ್ರಾರ್ಥನಾ ಗೀತೆ ಹಾಡಿದರು. ಎ.ಎಸ್. ಮಕಾನಾದಾರ ಸ್ವಾಗತಿಸಿದರು. ಫಕ್ಕೀರಮ್ಮ ಲಕ್ಕುಂಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಜಿ.ಸಿ. ರೇಷ್ಮಿ, ಡೀಡ್ಸ್ ಯೋಜನಾ ಸಂಯೋಜಕರಾದ ತುಕಾರಾಮ್ ಎಕ್ಕಾರು, ಮುಖ್ಯ ಕಾನೂನು ನೆರವು ಅಭಿರಕ್ಷಕರಾದ ಎಸ್.ವ್ಹಿ. ಗ್ರಾಮಪುರೋಹಿತ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕ ಗುರುರಾಜ ಬಿ.ಗೌರಿ ಉಪಸ್ಥಿತರಿದ್ದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎನ್ನುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸಮಾಜದ ಎಲ್ಲ ವಿಭಾಗಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದ ಉತ್ತಮ ಸಮಾಜ ನಿರ್ಮಿಸುವಲ್ಲಿ ಸಹಾಯವಾಗುತ್ತದೆ.
-ಜಿ.ಆರ್. ಶೆಟ್ಟರ್.
ಸಿ.ಜೆ.ಎಮ್ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು.



