ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಸಮಾಜೋತ್ಸವ ಸರ್ವ ಸಮಾಜದವರು ಸೇರಿ ನಡೆಸುವ ಕಾರ್ಯಕ್ರಮವಾಗಿದ್ದು, ಇದು ಒಂದು ಧಾರ್ಮಿಕ ಉತ್ಸವ ಅಲ್ಲ. ಸಮಾಜದ ಏಕತೆ, ಸಂಸ್ಕೃತಿಯ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ ಎಂದು ಸಮಿತಿ ಅಧ್ಯಕ್ಷ ಬಸವರಾಜ ಬಿಂಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತವೆ. ಭವ್ಯ ಶೋಭಾಯಾತ್ರೆಯು ಜ. 31ರಂದು ಮಧ್ಯಾಹ್ನ 3 ಗಂಟೆಗೆ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದರು.
ಶೋಭಾಯಾತ್ರೆಯಲ್ಲಿ ಬೃಹತ್ ಕುಂಭಮೇಳ ನಡೆಯಲಿದ್ದು, ನೂರಾರು ಮಹಿಳೆಯರು ಕುಂಭಮೇಳದಲ್ಲಿ ಭಾಗವಹಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮ ಅದೇ ದಿನ ಸಾಯಂಕಾಲ 6 ಗಂಟೆಗೆ ಹಾತಲಗೇರಿ ರಸ್ತೆಯ ಮಾಳೇಕೊಪ್ಪಮಠ ಅವರ ಬಯಲು ಜಾಗೆಯ ಶ್ರೀ ಸಾಯಿಬಾಬಾ ದೇವಸ್ಥಾನದ ಹತ್ತಿರ ನಡೆಸಲಾಗುವುದು. ದಿಕ್ಸೂಚಿ ಭಾಷಣವನ್ನು ಕೃಷ್ಣಾ ಜೋಷಿ ನಡೆಸಿಕೊಡುವರು. ದಿವ್ಯ ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ.ಪೂ. ಡಾ. ಕಲ್ಲಯ್ಯಜ್ಜನವರು ವಹಿಸಿಕೊಳ್ಳಲಿದ್ದಾರೆ ಎಂದರು.
ಈ ವೇಳೆ ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಕೇಶವರಾಮ್ ಕೊಳ್ಳಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಎಸ್.ಪಿ, ಚಿನ್ಮಯಾನಂದ ಟೆಂಗಿನಕಾಯಿ, ಶಶಿಧರ ದಿಂಡೂರ, ರಘುನಾಥಸಾ ಮೆರವಾಡೆ, ರಾಜಣ್ಣ ಮಲ್ಲಾಡದ, ಮಂಜುನಾಥ ಕೊಟ್ನೆಕಲ್, ಚಂದ್ರಕಾಂತ ಚವ್ಹಾಣ, ಪ್ರೇಮಾ ಕಡೆಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ಶೈಲೇಶ್ ಬಾಗಮಾರ, ಹರೀಶ ಪೂಜಾರ, ರಾಜಶೇಖರ ಕುಂಬಿ, ನಾಗವೇಣಿ ಕಟ್ಟಿಮನಿ, ಡಾ. ಉಮೇಶ ಹಾದಿ, ಚಿನ್ಮಯಾನಂದ ಟೆಂಗಿನಕಾಯಿ ಮುಂತಾದವರು ಉಪಸ್ಥಿತರಿದ್ದರು.



