ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ಎರಡೂವರೆ ದಶಕಗಳಿಂದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಗಳಿಸಿ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ, ಅಕ್ಷರ ಸಂಸ್ಕೃತಿ ಉಳಿಸಿ, ಪುಸ್ತಕ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿರುವ ಸ್ಥಳೀಯ ನಿರಂತರ ಪ್ರಕಾಶನದ ಪ್ರಕಾಶಕ, ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರು ರಾಜ್ಯಮಟ್ಟದ ಪ್ರಕಾಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಫೆಬ್ರವರಿ 7 ಮತ್ತು 8ರಂದು ಬೀದರ್ ಜಿಲ್ಲೆಯ ಬೇಲೂರಿನ ಶರಣ ಉರಿಲಿಂಗ ಪೆದ್ದಿ, ಶರಣೆ ಕಾಳವ್ವೆ ಉತ್ಸವ, ಲಿಂಗೈಕ್ಯ ಶಿವಲಿಂಗೇಶ್ವರ ಶಿವಯೋಗಿಗಳ 57ನೇ ಪುಣ್ಯ ಸ್ಮರಣೆ ನಿಮಿತ್ತ ಉರಿಲಿಂಗ ಪೆದ್ದಿ ಮಠದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಸಮಗ್ರ ಯೋಜನೆ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿಯವರು ಪ್ರಶಸ್ತಿ ಪ್ರದಾನ ಮಾಡುವರು.
ಪುಸ್ತಕೋದ್ಯಮಿ ಬಸವರಾಜ್ ಜಿ.ಕೊನೆಕ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಶರಣು ಸಲಗರ ಸಮಾರಂಭದ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಪುಸ್ತಕ ವ್ಯಾಪಾರಿ ಮತ್ತು ಪ್ರಕಾಶಕರ ಸಂಘದ ಜಿಯಾ ಉದ್ದಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಖ್ಯಾತ ಕವಿ ಡಾ. ರಾಜಶೇಖರ್ ಮಠಪತಿ ಸಮಾರೋಪ ನುಡಿಗಳನ್ನಾಡುವರು.
ಇದೇ ಸಂದರ್ಭದಲ್ಲಿ ನಿರಂತರ ಪ್ರಕಾಶನದ ಜೊತೆಗೆ ವಿದ್ಯಾನಿಧಿ ಪ್ರಕಾಶನ, ಅಭಿನವ ಪ್ರಕಾಶನ, ಶಾರದಾ ಪ್ರಕಾಶನ, ಅಮರ ಪ್ರಕಾಶನ, ಶಿರಾಪುರ ಪ್ರಕಾಶನ, ಧರಿನಾಡು ಪ್ರಕಾಶನ, ಪೂಜಾ ಪ್ರಕಾಶನ ಸಂಸ್ಥೆಗಳ ಪ್ರಕಾಶಕರೂ ಪ್ರಕಾಶನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.



